Asianet Suvarna News Asianet Suvarna News

ಮೌಢ್ಯ ಮೇಲೆ ಬ್ರಹ್ಮಾಸ್ತ್ರ; ಯಾವುದು ಮೌಢ್ಯ? ಯಾವುದು ಮೌಢ್ಯ ಅಲ್ಲ

ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ತರುವಾಯ ಕಾನೂನು ಉಲ್ಲಂಘಿಸುವ ವ್ಯಕ್ತಿಗೆ ಒಂದು ವರ್ಷದಿಂದ 7 ವರ್ಷಗಳ ತನಕ ಕಾರಾಗೃಹ ವಾಸ ಹಾಗೂ 5 ಸಾವಿರ ರು. ಗಳಿಂದ 50 ಸಾವಿರ ರು.ಗಳ ತನಕ ದಂಡ ವಿಧಿಸಬಹುದಾಗಿದೆ. ಜತೆಗೆ ಇಂತಹ ಪದ್ಧತಿಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದವರಿಗೂ ಇಷ್ಟೇ ಪ್ರಮಾಣದ ದಂಡ, ಶಿಕ್ಷೆ ವಿಧಿಸಬಹುದಾಗಿದೆ.

Vaastu astrology outside the ambit of anti superstition Bill

ವಿಧಾನಸಭೆ(ನ.15): ಮಡೆ ಮಡೆ ಸ್ನಾನ, ಬೆತ್ತಲೆ ಸೇವೆ, ಕೆಂಡ ಹಾಯುವುದು, ಬಾಯಿಗೆ ಬೀಗ, ವ್ಯಕ್ತಿಯನ್ನು ಕೊಕ್ಕೆಗೆ ನೇತು ಹಾಕುವುದು ಮತ್ತಿತರ ಪದ್ಧತಿ ನಿಷೇಧಿಸುವ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿ, ವಾಮಾಚಾರದಂತಹ ಮೌಢ್ಯ ಪ್ರತಿಬಂಧಿಸುವ ಹಾಗೂ ನಿರ್ಮೂಲನೆ ವಿಧೇಯಕ ಮಂಗಳವಾರ ಮಂಡನೆ ಆಯಿತು.

ಜ್ಯೋತಿಷ್ಯ, ವಾಸ್ತುಶಾಸ್ತ್ರ ಹಾಗೂ ದೈಹಿಕ ಹಾನಿ ಉಂಟಾಗದಂತಹ ಎಲ್ಲಾ ಧಾರ್ಮಿಕ ಆಚರಣೆಗಳಿಗೆ ವಿಧೇಯಕದಲ್ಲಿ ವಿನಾಯಿತಿ ನೀಡಲಾಗಿದೆ. ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಧರಣಿ, ಗದ್ದಲ ನಡೆಸುತ್ತಿರುವಾಗಲೇ ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಮಹತ್ವದ ವಿಧೇಯಕವನ್ನು ಮಂಡಿಸಿದರು. ಈ ವಿಧೇಯಕ ಕಾಯ್ದೆಯಾಗಿ ಜಾರಿಗೆ ಬಂದ ತರುವಾಯ ಕಾನೂನು ಉಲ್ಲಂಘಿಸುವ ವ್ಯಕ್ತಿಗೆ ಒಂದು ವರ್ಷದಿಂದ 7 ವರ್ಷಗಳ ತನಕ ಕಾರಾಗೃಹ ವಾಸ ಹಾಗೂ 5 ಸಾವಿರ ರು. ಗಳಿಂದ 50 ಸಾವಿರ ರು.ಗಳ ತನಕ ದಂಡ ವಿಧಿಸಬಹುದಾಗಿದೆ. ಜತೆಗೆ ಇಂತಹ ಪದ್ಧತಿಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದವರಿಗೂ ಇಷ್ಟೇ ಪ್ರಮಾಣದ ದಂಡ, ಶಿಕ್ಷೆ ವಿಧಿಸಬಹುದಾಗಿದೆ.

ಯಾವುದು ಮೌಢ್ಯ?: ಭಾನಾಮತಿ, ಮಾಟ ಮಂತ್ರದ ಹೆಸರಿನಲ್ಲಿ ಮೌಲ್ಯಯುತ ವಸ್ತುಗಳು,ಗುಪ್ತ ನಿಧಿ ನಿಕ್ಷೇಪ ಮತ್ತು ಬಚ್ಚಿಟ್ಟ ನಿಧಿಗಳನ್ನು ಹುಡುಕುವುದಕ್ಕೆ ಅಥವಾ ಅಂತಹ ಕಾರಣಕ್ಕೆ ಅಮಾನವೀಯ, ದುಷ್ಟ ಕೃತ್ಯ ಮತ್ತು ವಾಮಾಚಾರ ಮಾಡುವುದು, ಹಲ್ಲೆ, ಬೆತ್ತಲೆ ಮೆರವಣಿಗೆ ನಡೆಸುವುದು, ದೈನಂದಿನ ಚಟುವಟಿಕೆಗಳ ಮೇಲೆ ನಿಷೇಧ ಹೇರುವುದು,

ಅಮಾನವೀಯ ಕೃತ್ಯಗಳನ್ನು ನಡೆಸಲು ಪ್ರಚೋದಿಸುವುದು, ಸಲಹೆ ನೀಡುವುದು. ಅತೀಂದ್ರಿಯ ಶಕ್ತಿಯನ್ನು ಒಬ್ಬನ ದೇಹದಲ್ಲಿ ಆಹ್ವಾನಿಸಲಾಗಿದ್ದು, ಆತನ ಸಲಹೆ ಅನುಸರಿಸದಿದ್ದಲ್ಲಿ ದುಷ್ಟ ಪರಿಣಾಮ ಉಂಟಾಗಲಿದೆ ಎಂದು ಇತರರ ಮನಸ್ಸಿನಲ್ಲಿ ಭಯ ಮೂಡಿಸುವುದು. ದೆವ್ವವನ್ನು ಉಚ್ಛಾಟಿಸುವ ನೆಪದಲ್ಲಿ ಪಾದರಕ್ಷೆ ಅದ್ದಿದ ನೀರು ಕುಡಿಸುವುದು, ಹಗ್ಗ, ಸರಪಳಿಯಿಂದ ಕಟ್ಟುವುದು, ನೋವುಂಟು ಮಾಡುವುದು, ಲೈಂಗಿಕ ಕೃತ್ಯ ನಡೆಸುವಂತೆ ಪ್ರಚೋದಿಸುವುದು, ಬಲವಂತವಾಗಿ ಮೂತ್ರ, ಮಲವನ್ನು ಹಾಕುವುದು. ಭಾನಾಮತಿ, ಮಾಟ ಮಂತ್ರ, ವಾಮಾಚಾರ ಮಾಡುವುದಾಗಿ ನಂಬಿಸಿ ಜನರನ್ನು ಸಂಕಷ್ಟಕ್ಕೆ ತಳ್ಳು ವುದು, ದೆವ್ವ ಅಥವಾ ಮಂತ್ರಗಳನ್ನು ಆಹ್ವಾನಿಸುವ ಮೂಲಕ ಜನರನ್ನು ಸಂಕಟಕ್ಕೀಡು ಮಾಡುವುದು. ದೆವ್ವ, ಮಂತ್ರಗಳನ್ನು ಆಹ್ವಾನಿಸುವ ಮೂಲಕ ಜನಸಾಮಾನ್ಯರಲ್ಲಿ ಗಾಬರಿಯನ್ನು ಹುಟ್ಟಿಸುವುದು, ವೈದ್ಯಕೀಯ ಚಿಕಿತ್ಸೆ ಪಡೆಯದಂತೆ ಪ್ರತಿಬಂಧಿಸಿ, ದುಷ್ಟ, ಅಮಾನವೀಯ, ಅಘೋರಿ ಕೃತ್ಯಗಳನ್ನು ಆಚರಿಸುವಂತೆ ಅಥವಾ ಚಿಕಿತ್ಸೆ ಪಡೆಯುವಂತೆ ಜನರನ್ನು ಪ್ರೇರೇಪಿಸುವುದು, ವಾಮಾಚಾರದಿಂದ ಇತರರಲ್ಲಿ

ಸಾವು, ನೋವು, ಆರ್ಥಿಕ ನಷ್ಟ ಉಂಟು ಮಾಡುವ ಭಯವನ್ನು ಹುಟ್ಟಿಸುವುದು. ಬೆರಳುಗಳ ಮೂಲಕ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ನಂಬಿಸುವುದು, ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳಿಕೆ. ಅಲೌಕಿಕ ಶಕ್ತಿ ಇದೆ ಅಥವಾ ಮತ್ತೊಬ್ಬ ವ್ಯಕ್ತಿಯ ಪವಿತ್ರ ಆತ್ಮದ ಅವತಾರ ಅಥವಾ ಹಿಂದಿನ ಜನ್ಮದ ಪತಿ, ಪತ್ನಿ, ಪ್ರೇಮಿ ಎಂದು ನಂಬಿಸಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು, ಕೊಕ್ಕೆಯಿಂದ ನೇತು ಹಾಕುವುದು, ಕೊಕ್ಕೆಯನ್ನು ದೇಹದೊಳಗೆ ತೂರಿಸುವುದು (ಸಿಡಿ), ದೇಹಕ್ಕೆ ಚುಚ್ಚಿದ ಕೊಕ್ಕೆಯಿಂದ ತೇರನ್ನು ಎಳೆಯುವುದು, ಇಂತಹ ಸ್ವಯಂಕೃತ ಗಾಯವಾಗುವಂತಹ ಆಚರಣೆಗಳನ್ನು ಪ್ರೋತ್ಸಾಹಿಸುವುದು. ಚಿಕಿತ್ಸೆ ನೀಡುವ ನೆಪದಲ್ಲಿ ಮಕ್ಕಳನ್ನು ಮುಳ್ಳುಗಳ ಮೇಲೆ ಅಥವಾ ಎತ್ತರದಿಂದ ಎಸೆಯುವುದು, ಋತುಮತಿ ಅಥವಾ ಗರ್ಭಿಣಿ ಸ್ತ್ರೀಯನ್ನು ಒಂಟಿ ಮಾಡುವುದು,

ಬೆತ್ತಲೆ ಸೇವೆ, ಇತರ ಹೆಸರಿನಲ್ಲಿ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡುವುದು. ಪ್ರಾಣಿಯ ಕತ್ತನ್ನು ಕಚ್ಚಿ ಕೊಲ್ಲುವುದು, ಕೆಂಡ ಹಾಯಲು ಪ್ರೇರಣೆ, ಬಾಯಿಗೆ ಬೀಗ ಅಂದರೆ ನಾಲಿಗೆ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆ ತೂರಿಸುವ ಪದ್ಧತಿ, ನಾಯಿ, ಹಾವು, ಚೇಳಿನ ಕಡಿತಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯದಂತೆ ಮಾಡಿ ಮಂತ್ರ, ತಂತ್ರ, ಗಂಧ ದೋರ ಅಥವಾ ಇತರ ಚಿಕಿತ್ಸೆ ನೀಡುವುದನ್ನು ವಿಧೇಯಕದಲ್ಲಿ ಪ್ರತಿಬಂಧಿಸಲಾಗಿದೆ.

ಯಾವುದು ಮೌಢ್ಯ ಅಲ್ಲ?: ಧಾರ್ಮಿಕ, ಆಧ್ಯಾತ್ಮಿಕ ಸ್ಥಳಗಳಲ್ಲಿ ನಡೆಸುವ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮದಂತಹ ಪೂಜಾ ವಿಧಾನ, ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪರಿಕ ಕಲಿಕೆಗಳು ಹಾಗೂ ಕಲೆಗಳು, ಪದ್ಧತಿ, ಅದರ ಪ್ರಸಾರ, ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು, ಪ್ರಸಾರ, ಪ್ರಚಾರ, ದೈಹಿಕವಾಗಿ ಹಾನಿ ಉಂಟು ಮಾಡದ ಧಾರ್ಮಿಕ ಬೋಧಕರ ಪವಾಡಗಳ ಬಗ್ಗೆ ಸಾಹಿತ್ಯ ಪ್ರಸಾರ, ಪ್ರಚಾರ. ಎಲ್ಲಾ ಧಾರ್ಮಿಕ ಸಂಭ್ರಮಾಚರಣೆಗಳು, ಹಬ್ಬ, ಪ್ರಾರ್ಥನೆ, ಉಪಾಸನೆ. ಮೆರವಣಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಯಾವುದೇ ಕೃತ್ಯ ಮತ್ತು ಇತರ ಎಲ್ಲ ಆಚರಣೆ.

ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್‌'ನಲ್ಲಿ ದೈಹಿಕವಾಗಿ ಹಾನಿ ಉಂಟುಮಾಡದ ಪ್ರಾರ್ಥನೆ, ಉಪಾಸನೆ ಮತ್ತು ಎಲ್ಲಾ ಧಾರ್ಮಿಕ ಆಚರಣೆ. ಧರ್ಮಾಚರಣೆಗೆ ಅನುಸಾರವಾಗಿ ಮಕ್ಕಳ ಕಿವಿಗಳು ಮತ್ತು ಮೂಗು ಚುಚ್ಚುವುದು ಹಾಗೂ ಜೈನ ಸಂಪ್ರದಾಯದ ಕೇಶಲೋಚನದಂತಹ ಧಾರ್ಮಿಕ ಆಚರಣೆ. ವಾಸ್ತುಶಾಸ್ತ್ರದ ಕುರಿತು ಸಲಹೆ, ಜ್ಯೋತಿಷ್ಯ ಮತ್ತು ಇತರ ಜ್ಯೋತಿಷಿಗಳಿಂದ ಸಲಹೆ ಇವುಗಳು ಮೌಢ್ಯವಲ್ಲ ಎಂದು ಹೇಳಲಾಗಿದೆ. ಮೌಢ್ಯ ಆಚರಣೆಗಳಿಂದ ಹಾನಿಗೊಳಗಾದ ವ್ಯಕ್ತಿಗಳಿಗೆ ಸರಿಯಾದ ವೈದ್ಯಕೀಯ ಪರಿಹಾರ ನೀಡುವುದು ಹಾಗೂ ಆ ಉದ್ದೇಶಕ್ಕೆ ಪ್ರಾಧಿಕಾರಗಳ ನೇಮಕ ಕುರಿತಂತೆ ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.

 

Follow Us:
Download App:
  • android
  • ios