ರಾಜ್ಯದಲ್ಲಿ ವಾರಸುದಾರರು ಇಲ್ಲದ ಹಾಗೂ ಬಿಡಾಡಿ ಹಸುಗಳ ರಕ್ಷಣೆಗೆ ಸ್ವತಃ ಇದೀಗ ಹೈ ಕೋರ್ಟೆ ಮುಂದಾಗಿದೆ.
ನೈನಿತಾಲ್: ರಾಜ್ಯದಲ್ಲಿನ ಬಿಡಾಡಿ ಹಸುಗಳು ಹಾಗೂ ವಾರಸುದಾರರು ಇಲ್ಲದ ಹಸುಗಳ ನೆರವಿಗೆ ಧಾವಿಸಿರುವ ಉತ್ತರಾಖಂಡ ಹೈಕೋರ್ಟ್, ಇನ್ನು ತಾನು ರಾಜ್ಯದ ಗೋವುಗಳ ‘ಕಾನೂನಾತ್ಮಕ ಪಾಲಕ’ ಎಂದು ಘೋಷಿಸಿಕೊಂಡಿದೆ. ಇದೇ ಮೊದಲ ಬಾರಿ ದೇಶದ ನ್ಯಾಯಾಲಯವೊಂದು ತನ್ನ ಇಂಥ ವಿವೇಚನಾಧಿಕಾರ ಬಳಸಿಕೊಂಡಿದೆ ಎಂದು ಹೇಳಲಾಗಿದೆ.
ಲ್ಯಾಟಿನ್‌ನಲ್ಲಿ ‘ಪೇರೆಂಟ್ಸ್ ಪೇಟ್ರೀ (ದೇಶದ ಪಾಲಕ) ಎಂಬ ಸಿದ್ಧಾಂತ ಇದ್ದು, ಈ ಸಿದ್ಧಾಂತವು ನ್ಯಾಯಾಲಯಕ್ಕೆ ನಿರ್ಗತಿಕರನ್ನು ರಕ್ಷಿಸುವ ಹಾಗೂ ಅವರ ಪಾಲಕನಂತೆ ವರ್ತಿಸುವ ಅಧಿಕಾರವನ್ನ ನೀಡುತ್ತದೆ. ಈ ವಿವೇಚನಾಧಿಕಾರವನ್ನು ಬಳಸಿಕೊಂಡ ಉತ್ತರಾಖಂಡ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಾಧೀಶ ನ್ಯಾ. ರಾಜೀವ್ ಶರ್ಮಾ ಅವರ ಪೀಠ, ಸರ್ಕಾರಕ್ಕೆ ಗೋರಕ್ಷಣೆಗೆ ಸಂಬಂಧಿಸಿದಂತೆ 31 ನಿರ್ದೇಶನಗಳನ್ನು ನೀಡಿತು.
ಪ್ರತಿ 25 ಹಳ್ಳಿಗಳ ಒಂದು ಕ್ಲಸ್ಟರ್‌ನಲ್ಲಿ ಗೋರಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕು. ಹಸುಗಳನ್ನು ಸುಖಾಸುಮ್ಮನೇ ಬಿಟ್ಟು ಹೋಗುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅದು ಸೂಚಿಸಿತು. ಕೋರ್ಟ್ ಆದೇಶದಿಂದಾಗಿ ಈಗ ಬಿಡಾಡಿ ಹಸುಗಳು ಹಾಗೂ ರೈತರಿಗೆ ಸಾಕಲಾಗದೇ ಹೊರೆಯಾಗಿರುವ ಹಸುಗಳಿಗೆ ಅನುಕೂಲವಾಗಲಿದ್ದು, ಈ ಕ್ಲಸ್ಟರ್ ಕೇಂದ್ರಗಳಲ್ಲಿ ಹಸುಗಳ ಪಾಲನೆ-ಪೋಷಣೆ ಕೋರ್ಟ್ ಉಸ್ತುವಾರಿಯಲ್ಲೇ ನಡೆಯಲಿದೆ.
ಅಲೀಂ ಅಲಿ ಎಂಬ ಹರಿದ್ವಾರದ ರೈತನೊಬ್ಬ, ತನ್ನ ಜಮೀನಿನ ಪಕ್ಕ ಬಿಡಾಡಿ ದನಗಳನ್ನು ಅಕ್ರಮವಾಗಿ ವಧಿಸಲಾಗುತ್ತಿದೆ. ಇದರ ರಕ್ತ ನದಿಗೆ ಹೋಗಿ ಮಲಿನವಾಗುತ್ತಿದೆ ಎಂದು ಹೈಕೋರ್ಟಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ. ಅದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
