ಲಖನೌ [ಅ.02]: ಜನಸಂಖ್ಯೆಯಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶದಲ್ಲಿ ನೆಲೆಯೂರಿರುವ ಬಾಂಗ್ಲಾದೇಶ ಹಾಗೂ ಇನ್ನಿತರೆ ವಿದೇಶಿ ಪ್ರಜೆಗಳ ವಿರುದ್ಧ ರಾಜ್ಯ ಸರ್ಕಾರ ಬೇಟೆ ಆರಂಭಿಸಿದೆ. ಇಂತಹ ಪ್ರಜೆಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ. ನಂತರ ಅಕ್ರಮ ವಿದೇಶಿಗರನ್ನು ಗಡೀಪಾರು ಮಾಡುವ ಕಾರ್ಯಯೋಜನೆ ಹಾಕಿಕೊಂಡಿದೆ.

ಅಸ್ಸಾಂನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನಡೆಸಲಾದ, 19 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿರುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯ ಮತ್ತೊಂದು ಆವೃತ್ತಿ ಇದಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಆದರೆ ಇದನ್ನು ಅಲ್ಲಗಳೆದಿರುವ ಪೊಲೀಸರು, ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ನಡೆಸುತ್ತಿರುವ ಕಾರ್ಯಾಚರಣೆ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲೂ ಹಲವು ಕಡೆ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಆರೋಪ ಬಹಳ ವರ್ಷಗಳಿಂದ ಇದ್ದು, ರಾಜ್ಯದಲ್ಲೂ ಅಕ್ರಮ ವಲಸಿಗರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಾ ಎಂಬ ಕುತೂಹಲ ಮೂಡಿದೆ. ಅಲ್ಲದೆ, ಒಬ್ಬ ಅಕ್ರಮ ವಲಸಿಗನೂ ದೇಶದಲ್ಲಿ ಇರಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿರುವುದು, ಇದಕ್ಕೆ ಇಂಬು ನೀಡಿದೆ.

ಡಿಜಿಪಿ ಪತ್ರ:  ಜಿಲ್ಲಾ ಕೇಂದ್ರಗಳ ಹೊರಭಾಗದಲ್ಲಿರುವ ಸಾರಿಗೆ ಹಬ್‌ ಹಾಗೂ ಕೊಳಗೇರಿಗಳನ್ನು ತಪಾಸಣೆ ನಡೆಸಿ, ಶಂಕಾಸ್ಪದ ವ್ಯಕ್ತಿಗಳ ದಾಖಲೆ ಪರಿಶೀಲಿಸಬೇಕು. ವಿದೇಶಿಗರಿಗೆ ನಕಲಿ ದಾಖಲೆ ಕೊಡಿಸಲು ನೆರವಾದ ಸರ್ಕಾರಿ ಸಿಬ್ಬಂದಿಗಳನ್ನು ಪತ್ತೆ ಹಚ್ಚಬೇಕು. ಬಾಂಗ್ಲಾದೇಶಿಗರು ಅಥವಾ ಇನ್ನಿತರೆ ವಿದೇಶಿಗರ ಬೆರಳಚ್ಚು ಸಂಗ್ರಹಿಸಬೇಕು ಎಂದು ಸೂಚಿಸಿ ಉತ್ತರಪ್ರದೇಶ ಪೊಲೀಸ್‌ ಮುಖ್ಯಸ್ಥ ಒ.ಪಿ. ಸಿಂಗ್‌ ಅವರು ಎಲ್ಲ ಜಿಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ತಮ್ಮಲ್ಲಿ ಕೆಲಸ ಮಾಡುವ ಎಲ್ಲ ನೌಕರರ ಗುರುತಿನ ಪುರಾವೆಯನ್ನು ಹೊಂದುವುದು ನಿರ್ಮಾಣ ಕಂಪನಿಗಳ ಜವಾಬ್ದಾರಿಯಾಗಿದೆ. ಪೊಲೀಸರು ಅಕ್ರಮ ವಲಸಿಗರ ತಪಾಸಣೆ ವೇಳೆ ವಿಡಿಯೋ ಚಿತ್ರೀಕರಿಸಬೇಕು. ಯಾರಿಗೂ ತೊಂದರೆ ಕೊಡಬಾರದು. ಮೊದಲು ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.

ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಕಾರ್ಯಾಚರಣೆಯ ಬಗ್ಗೆ ಕಳೆದ ತಿಂಗಳು ಮೆಚ್ಚುಗೆ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಗತ್ಯ ಬಿದ್ದರೆ ರಾಜ್ಯದಲ್ಲೂ ಅಂತಹುದೇ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದರು.