ಪ್ರಕರಣದ ಪ್ರಮುಖ ಆರೋಪಿ ಭರತ್ ಎಂಬಾತನೊಂದಿಗೆ ಕಲ್ಲಡ್ಕ ಭಟ್ ಅವರು ವೇದಿಕೆ ಹಂಚಿಕೊಂಡಿದ್ದಾರೆನ್ನಲಾಗುವ ಫೋಟೋವೊಂದು ಬೆಳಕಿಗೆ ಬಂದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಸಚಿವರು ಆರೆಸ್ಸೆಸ್ ಮುಖಂಡನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು(ಜೂನ್ 25): ಎಸ್'ಡಿಪಿಐ ಕಾರ್ಯಕರ್ತ ಮೊಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಐದು ಆರೋಪಿಗಳ ಬಂಧನದ ಬೆನ್ನಲ್ಲೇ ಸಚಿವ ಯುಟಿ ಖಾದರ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಶ್ರಫ್ ಕೊಲೆ ಕೃತ್ಯದ ಹಿಂದೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕೈವಾಡ ಇದೆ ಎಂದು ಸಚಿವರು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಭರತ್ ಎಂಬಾತನೊಂದಿಗೆ ಕಲ್ಲಡ್ಕ ಭಟ್ ಅವರು ವೇದಿಕೆ ಹಂಚಿಕೊಂಡಿದ್ದಾರೆನ್ನಲಾಗುವ ಫೋಟೋವೊಂದು ಬೆಳಕಿಗೆ ಬಂದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಸಚಿವರು ಆರೆಸ್ಸೆಸ್ ಮುಖಂಡನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?
ಜೂನ್ 21ರಂದು ಎಸ್'ಡಿಪಿಐ ಸಂಘಟನೆಯ ಅಮ್ಮುಂಜೆ ವಲಯ ಅಧ್ಯಕ್ಷ ಹಾಗೂ ಆಟೋ ಡ್ರೈವರ್ ಮೊಹಮ್ಮದ್ ಅಶ್ರಫ್ ಕಲಾಯಿ ಅವರನ್ನು ಬಂಟ್ವಾಳದ ಬೆಂಜನಪಡವು ಎಂಬಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಏಳು ಮಂದಿ ಈ ಕೊಲೆಯ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಇವರ ಪೈಕಿ ನಿನ್ನೆ ಸಂಜೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಪವನ್ ಕುಮಾರ್ ಅಲಿಯಾಸ್ ಪುಂಡ(24), ರಂಜಿತ್(28), ಅಭಿನ್ ರೈ ಅಲಿಯಾಸ್ ಅಭಿ(23), ತುಂಬೇಯ ನಿವಾಸಿಗಳಾದ ಸಂತೋಷ್ ಅಲಿಯಾಸ್ ಸಂತು(23) ಹಾಗೂ ಶಿವಪ್ರಸಾದ್ ಅಲಿಯಾಸ್ ಶಿವು(24) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಪೈಕಿ ಸಂತೋಷ್ ಹೊರತುಪಡಿಸಿ ಉಳಿದವರೆಲ್ಲರ ಮೇಲೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳು ಕೋಮುಗಲಭೆಗಳಿಗೆ ಸಂಬಂಧಿಸಿದ್ದಾಗಿವೆ.

ಇನ್ನಿಬ್ಬರು ಆರೋಪಿಗಳನ್ನು ಭರತ್ ಮತ್ತು ದಿವ್ಯರಾಜ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳೇ ಅಶ್ರಫ್ ಕೊಲೆಯ ಮಾಸ್ಟರ್'ಮೈಂಡ್'ಗಳೆನ್ನಲಾಗಿದೆ. ಆರೋಪಿಗಳನ್ನು ಹಿಡಿಯಲು ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ಸಿಸಿಬಿ ಪೊಲೀಸರ ಸಹಾಯದಿಂದ ಉಳಿದಿಬ್ಬರು ಆರೋಪಿಗಳಿಗೆ ಬಲೆ ಬೀಸಲಾಗಿದೆ. ದಿವ್ಯರಾಜ್ ಮತ್ತು ಭರತ್ ಅಡಗಿಕೊಂಡಿರುವ ಸ್ಥಳದ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಯಾವುದೇ ಕ್ಷಣದಲ್ಲಾದರೂ ಅವರನ್ನು ಹಿಡಿಯುವ ಸಾಧ್ಯತೆ ಇದೆ ಐಜಿಪಿ ಹರಿಶೇಖರನ್ ತಿಳಿಸಿದ್ದಾರೆ.