‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!| ಆಸ್ತಿಗಾಗಿ ಪತಿ, ಅತ್ತೆ- ಮಾವ ಸೇರಿ ಬಂಧುಗಳಿಗೆ ಸೈನೈಡ್‌ ತಿನ್ನಿಸಿ ಕೊಂದ ಆರೋಪ| 14 ವರ್ಷದಲ್ಲಿ 6 ಮಂದಿ ಬಲಿ ಪಡೆದ ಪ್ರಕರಣಕ್ಕೆ ರೋಚಕ ತಿರುವು: ಮಹಿಳೆ ಬಂಧನ

ಕೋಳಿಕ್ಕೋಡ್‌[ಅ.06]: ಮಾನವನಾಗಿ ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಕಣ್ಣು ಮುಚ್ಚಲೇ ಬೇಕು. ಆದರೆ ಕೇರಳದ ಕೋಳಿಕ್ಕೋಡ್‌ ಜಿಲ್ಲೆಯ ಕೂಡಥಾಯಿ ಎಂಬ ಪ್ರದೇಶದಲ್ಲಿ ಕಳೆದ 14 ವರ್ಷಗಳಲ್ಲಿ ಒಂದೇ ಕುಟುಂಬದ 6 ಮಂದಿ ಇಹಲೋಕ ತ್ಯಜಿಸಿದ್ದಾರೆ. ವಿಚಿತ್ರ ಎಂದರೆ, ಅವರೆಲ್ಲರ ಸಾವು ಒಂದೇ ರೀತಿ ಆಗಿದೆ. ಊಟ ಮಾಡಿದ ಬಳಿಕ ಎಲ್ಲರೂ ಪ್ರಜ್ಞೆ ತಪ್ಪಿ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈ ಎಲ್ಲರ ಸಾವು ಸೈನೈಡ್‌ ಪ್ರಾಶನದಿಂದ ಆಗಿದೆ ಎಂಬ ಸಂದೇಹ ಮೂಡಿದೆ. ಇನ್ನಷ್ಟುಆಳಕ್ಕೆ ಇಳಿದಾಗ, ಈ ಎಲ್ಲ ಮರಣಗಳ ಹಿಂದಿನ ಸೂತ್ರಧಾರಿ ಅದೇ ಕುಟುಂಬದ ಸೊಸೆ ಎಂಬುದು ಸ್ಪಷ್ಟವಾಗಿದೆ!

17ನೇ ಕೊಲೆ ಕೇಸಲ್ಲೂ ಸೈನೈಡ್‌ ಮೋಹನ್‌ ದೋಷಿ

ಆಸ್ತಿ ಲಪಟಾಯಿಸಲು ಪತಿ, ಅತ್ತೆ-ಮಾವ ಸೇರಿ ತನ್ನ ಕುಟುಂಬದ ಆರು ಮಂದಿಗೆ ಸೈನೈಡ್‌ ಪ್ರಾಶನ ಮಾಡಿಸಿ ಕೊಂದ ಆರೋಪದ ಮೇರೆಗೆ ಜಾಲಿ ಥಾಮಸ್‌ ಎಂಬ ಮಹಿಳೆ ಹಾಗೂ ಆಕೆಯ ಎರಡನೇ ಪತಿ ಶಾಜು ಸ್ಕಾರಿಯಾ, ಮಹಿಳೆಗೆ ಸೈನೈಡ್‌ ಪೂರೈಸಿದ್ದಾನೆನ್ನಲಾದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?:

ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಪಿ. ಟಾಮ್‌ ಥಾಮಸ್‌ (66), ಅವರ ಪತ್ನಿ ಅಣ್ಣಮ್ಮ (57), ಪುತ್ರ ರಾಯ್‌ ಥಾಮಸ್‌ (40), ಟಾಮ್‌ ಅವರ ಸೋದರನ ಸೊಸೆ ಸಿಲಿ ಶಾಜು (44), ಆಕೆಯ 2 ವರ್ಷದ ಮಗಳು ಆಲ್ಪೈನ್‌, ಅಣ್ಣಮ್ಮ ಸೋದರ ಮ್ಯಾಥ್ಯೂ ಮಂಜದಿಯಿಲ್‌ (68) ಅವರು 2002ರಿಂದ 2016ರ ನಡುವೆ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಈ ಎಲ್ಲರ ಸಾವಿಗೆ ಸಾಕ್ಷಿಯಾಗಿದ್ದವಳು ರಾಯ್‌ ಥಾಮಸ್‌ ಅವರ ಪತ್ನಿ ಜಾಲಿ ಥಾಮಸ್‌.

ಇತ್ತೀಚೆಗೆ ಈಕೆ ಕುಟುಂಬದ ಆಸ್ತಿಯೊಂದನ್ನು ಕಬಳಿಸಲು ನಕಲಿ ಉಯಿಲೊಂದನ್ನು ಮಾಡಿಸಿದ್ದಳು. ಇದು ಅಮೆರಿಕದಲ್ಲಿ ನೆಲೆಸಿರುವ ರಾಯ್‌ ಥಾಮಸ್‌ ಅವರ ಸೋದರ ರೋಜೋ ಅವರಿಗೆ ಗೊತ್ತಾಗಿತ್ತು. ಅವರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರಿಗೆ ಅನುಮಾನ ಮೂಡಲು ಆರಂಭಿಸಿತು. ಪತ್ನಿ ನಿಧನಾನಂತರ ಜಾಲಿ ಥಾಮಸ್‌ ಮೃತ ಸಿಲಿ ಶಾಜು ಅವರ ಪತಿ ಶಾಜು ಸ್ಕಾರಿಯಾ ಅವರನ್ನು ವರಿಸಿದ್ದಳು. ಜತೆಗೆ ನಕಲಿ ಉಯಿಲು ಮಾಡಿದ್ದಳು. ಪೊಲೀಸರು ಆಳಕ್ಕಿಳಿದಾಗ ಹೊಸ ಹೊಸ ಸಂಗತಿಗಳು ಬೆಳಕಿಗೆ ಬಂದವು.

ಜಾಲಿ ಥಾಮಸ್‌ ವಿಚಾರಣೆಗೆ ಕರೆಸಿದ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದರು. ಆಕೆ ನಿರಾಕರಿಸಿದಾಗ ಮೃತದೇಹಗಳನ್ನು ಹೊರತೆಗೆದು ಪರೀಕ್ಷೆಗೊಳಪಡಿಸಲು ನಿರ್ಧರಿಸಿದರು. ಅದರಂತೆ ಶುಕ್ರವಾರ ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮಂಗಳೂರು ನ್ಯಾಯಾಲಯದಿಂದ ಸೈಕೋ ಕಿಲ್ಲರ್ ಗೆ ಮರಣ ದಂಡನೆ

ಪೊಲೀಸರಿಗೆ ಜಾಲಿ ಮೇಲೆ ಅನುಮಾನ ಮೂಡಲು ಮತ್ತೊಂದು ಕಾರಣ ಏನೆಂದರೆ, ಆಕೆಯ ಪತಿ 2011ರಲ್ಲಿ ಊಟ ಸೇವನೆ ಬಳಿಕ ನಿಧನರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಆ ಸಂದರ್ಭ ಪರಿಶೀಲನೆಗೆ ಒಳಪಡಿಸಿದಾಗ ಅವರ ದೇಹದಲ್ಲಿ ವಿಷ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಭಾವನೆ ಕುಟುಂಬದಲ್ಲಿ ಮೂಡಿತ್ತು. ಕುಟುಂಬದ ಮರಾರ‍ಯದೆ ಹಾಳಾಗುತ್ತದೆ ಎಂಬ ಕಾರಣ ನೀಡಿ ರಾಯ್‌ ಅವರದ್ದು ಹೃದಯಾಘಾತ ಎಂದು ಬಿಂಬಿಸಲಾಗಿತ್ತು.

ಒಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಜಾಲಿ ಥಾಮಸ್‌ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಕೆ ಹಾಗೂ ಆಕೆಯ ಎರಡನೇ ಪತಿ ಮತ್ತು ಸೈನೈಡ್‌ ಪೂರೈಸಿದ್ದಾನೆ ಎನ್ನಲಾದ ಬಂಧುವನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಜಾಲಿ ಥಾಮಸ್‌ ಎಂಬ ಸೈನೈಡ್‌ ಸೊಸೆಯ ಹಣೆಬರಹ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.