ಬೆಂಗಳೂರು : ಎಲೆಕ್ಟ್ರಾನಿಕ್‌ ಮತಯಂತ್ರದ ಸಾಚಾತನ ಕುರಿತು ಮತ್ತೆ ಪ್ರಶ್ನೆ ಮಾಡಿರುವ ಕಾಂಗ್ರೆಸ್‌ ನಾಯಕತ್ವ, ಲೋಕಸಭಾ ಚುನಾವಣೆಯನ್ನು ಮತಪತ್ರದ ಮೂಲಕವೇ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಲು ನಿರ್ಧರಿಸಿದೆ. ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗುರುವಾರ ನಡೆಸಿದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಾ. ಜಿ. ಪರಮೇಶ್ವರ್‌ ಈ ವಿಷಯ ತಿಳಿಸಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆ ನಡೆಸಿದಾಗ ಎಲೆಕ್ಟ್ರಾನಿಕ್‌ ಮತಯಂತ್ರ ದುರ್ಬಳಕೆಯಾಗಿರುವ ಬಗ್ಗೆ ನಮಗೆ ಸಂಶಯಗಳಿವೆ. ಶೇ.80ರಷ್ಟುಕಾಂಗ್ರೆಸ್‌ಗೆ ಮತ ಹಾಕುವ ಜನರು ಇದ್ದ ಕಡೆ ಬಿಜೆಪಿಗೆ ಲೀಡ್‌ ಬಂದಿದೆ. ಇಂತಹ ಹತ್ತಾರು ಉದಾಹರಣೆಗಳಿವೆ. ಈ ಬಗ್ಗೆ ನಮಗೆ ಮೊದಲೇ ಸಂಶಯವಿತ್ತು. ಹೀಗಾಗಿಯೇ ಚುನಾವಣಾ ಆಯೋಗಕ್ಕೆ ಮತಪತ್ರ ಬಳಸುವಂತೆ ಮನವಿ ಮಾಡಿದ್ದೆವು ಎಂದರು.

ಮತಯಂತ್ರ ದುರ್ಬಳಕೆ ಮಾಡುವಂತಿದ್ದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಎಲ್ಲಾ 224 ಕ್ಷೇತ್ರಗಳಲ್ಲೂ ದುರ್ಬಳಕೆ ಮಾಡಲು ಸಾಧ್ಯವೇ? ಹೀಗೆ ಮಾಡಿದರೆ ಅನುಮಾನ ಬರುವುದಿಲ್ಲವೇ? ಹೀಗಾಗಿ ಆಯ್ದ ಮತಗಟ್ಟೆಗಳಲ್ಲಿ ಮತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.

ಅನುಮಾನವಿದ್ದರೆ ವಿವಿಪ್ಯಾಟ್‌ ಚೀಟಿ ಎಣಿಕೆ ನಡೆಸಲು ಕೋರಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಎಲೆಕ್ಟ್ರಾನಿಕ್‌ ಮತಯಂತ್ರ ಹೇಗೆಲ್ಲ ದುರ್ಬಳಕೆ ಮಾಡಬಹುದು ಎಂಬ ಬಗ್ಗೆ ನಾವು ಒಂದಷ್ಟುಮಾಹಿತಿ ಪಡೆದುಕೊಂಡಿದ್ದೇವೆ. ಈ ಮಾಹಿತಿಯಿದ್ದರಿಂದಲೇ ಮತಪತ್ರಕ್ಕಾಗಿ ಆಗ್ರಹ ಮಾಡಿದ್ದೆವು. ಶೀಘ್ರವೇ ಮತ್ತೆ ಚುನಾವಣಾ ಆಯೋಗಕ್ಕೆ ತನಿಖೆ ನಡೆಸುವಂತೆ ಮನವಿ ಸಲ್ಲಿಸಲಾಗುವುದು. ಇದಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರ ಬಳಕೆ ನಿಲ್ಲಿಸಿ, ಮತಪತ್ರ ಬಳಕೆ ಮಾಡಬೇಕು ಎಂದು ಆಯೋಗವನ್ನು ಒತ್ತಾಯಿಸುವುದಾಗಿ ಹೇಳಿದರು.

ಕಾಂಗ್ರೆಸ್‌ಗೆ ಅಸ್ತಿತ್ವ ಇದೆ:

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ಉತ್ತಮ ಬೆಂಬಲವನ್ನೇ ನೀಡಿದ್ದಾರೆ. ಸಂಖ್ಯೆಯಲ್ಲಿ ನಾವು ಕಡಿಮೆಯಿದ್ದರೂ, ಶೇಕಡಾವಾರು ಮತ ಗಳಿಕೆಯಲ್ಲಿ ಉತ್ತಮ ಸ್ಥಾನದಲ್ಲೇ ಇದ್ದೇವೆ. ಕಾಂಗ್ರೆಸ್‌ಗೆ ಶೇ.38ರಷ್ಟುಮತ ಬಿದ್ದಿದ್ದರೆ, ಬಿಜೆಪಿಗೆ ಶೇ.36ರಷ್ಟುಮತ ಬಿಜೆಪಿಗೆ ಬಿದ್ದಿದೆ. ಇದು ಸ್ಪಷ್ಟವಾಗಿ ಕಾಂಗ್ರೆಸ್‌ ಬಗ್ಗೆ ರಾಜ್ಯದ ಜನರ ಒಲವಿದೆ ಎಂಬುದನ್ನು ತೋರಿಸುತ್ತದೆ ಮತ್ತು ಕಾಂಗ್ರೆಸ್‌ ರಾಜ್ಯದಲ್ಲಿ ಪುಟಿದೇಳುವ ಅವಕಾಶ ಹೊಂದಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ಸಂಖ್ಯೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಹಿನ್ನಡೆಯಾದರೂ ಮತ್ತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಮುಖ್ಯ ಕಾರಣ ಮೋದಿ ಅವರ ಸರ್ವಾಧಿಕಾರಿ ಆಡಳಿತಕ್ಕೆ ಕಡಿವಾಣ ಹಾಕಬೇಕು ಎಂಬುದು. ಈ ಕಡಿವಾಣ ಹಾಕುವ ಪ್ರಕ್ರಿಯೆ ಕರ್ನಾಟಕದಿಂದಲೇ ಆರಂಭವಾಗಿದೆ ಎಂದರು.

ಶುಕ್ರವಾರ ನಡೆಯಲಿರುವ ವಿಶ್ವಾಸ ಮತದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಯಶಸ್ಸು ಸಿಗಲಿದೆ. ಬಿಜೆಪಿಯವರು ಎಷ್ಟೇ ಆಮಿಷವೊಡ್ಡಿದರೂ ಕಾಂಗ್ರೆಸ್ಸಿನ ಯಾವ ಶಾಸಕರು ಅದಕ್ಕೆ ಬಲಿಯಾಗುವುದಿಲ್ಲ. ಈ ಬಾರಿ ಬಿಜೆಪಿಯವರು ಎಲ್ಲಾ ಎಲ್ಲೆಗಳನ್ನು ಮೀರಿದ್ದಾರೆ. ಕದ್ದು ಮುಚ್ಚಿ ಕುದುರೆ ವ್ಯಾಪಾರ ಮಾಡುವುದು ಗೊತ್ತಿತ್ತು. ಆದರೆ, ಬಹಿರಂಗವಾಗಿ ಶಾಸಕರನ್ನು ಸೆಳೆಯಲು ಯತ್ನಿಸಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಸಾರ್ವಜನಿಕವಾಗಿ ಕುದುರೆ ವ್ಯಾಪಾರ ನಡೆಸಿದ್ದನ್ನು ಒಪ್ಪಿದ್ದಾರೆ. ಇದನ್ನು ನಾನು ಬೇರೆಲ್ಲೂ ನೋಡಿರಲಿಲ್ಲ ಎಂದರು.