ನವದೆಹಲಿ[ಸೆ.16]: ಪ್ರಧಾನಿ ನರೇಂದ್ರ ಮೋದಿ ಅವರು ಸೆ.22ರಂದು ಅಮೆರಿಕದ ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಪಾಲ್ಗೊಳ್ಳಲಿರುವ ‘ಹೌಡಿ ಮೋದಿ!’ ಮೆಗಾ ರಾರ‍ಯಲಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಚ್ಚರಿಯ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಟ್ರಂಪ್‌ ಅವರ ಕಡೆಯಿಂದ ಈ ಬಗ್ಗೆ ಈವರೆಗೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಆದಾಗ್ಯೂ ಅಚ್ಚರಿ ಭೇಟಿಗಳಿಗೆ ಟ್ರಂಪ್‌ ಹೆಸರುವಾಸಿಯಾಗಿರುವ ಹಿನ್ನೆಲೆಯಲ್ಲಿ ಮೋದಿ ರಾರ‍ಯಲಿಯಲ್ಲಿ ಅವರು ಭಾಗವಹಿಸಬಹುದು ಎಂದು ಹೇಳಲಾಗಿದೆ.

ಅಮೆರಿಕಕ್ಕೆ 4ನೇ ಸೇನಾಪಡೆ: ಬಾಹ್ಯಾಕಾಶಕ್ಕೆಂದೇ ಪಡೆ ಘೋಷಿಸಿದ ಟ್ರಂಪ್‌ ಸರ್ಕಾರ

ಹೂಸ್ಟನ್‌ ಸಮಾವೇಶದಲ್ಲಿ 50 ಸಾವಿರ ಭಾರತೀಯ ಮೂಲದ ನಿವಾಸಿಗಳು ಪಾಲ್ಗೊಳ್ಳಲಿದ್ದಾರೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವೇದಿಕೆಯನ್ನು ಬಳಸಿಕೊಂಡು ಮತದಾರರನ್ನು ಸೆಳೆಯಲು ಟ್ರಂಪ್‌ ಯತ್ನಿಸುವ ನಿರೀಕ್ಷೆ ಇದೆ. ಇದೇ ವೇಳೆ, ವ್ಯಾಪಾರ ಒಪ್ಪಂದವನ್ನು ಪ್ರಕಟಿಸುವ ಸಾಧ್ಯತೆಯೂ ಇದೆ.

ಅಮೆರಿಕದ ನೈಋುತ್ಯ ಸೀಮೆಯಲ್ಲಿ ಯಾರಾದರೂ ಮುಖಾಮುಖಿಯಾದಾಗ ಯೋಗ ಕ್ಷೇಮ ವಿಚಾರಿಸಲು ‘ಹೌಡಿ’ ಎನ್ನುತ್ತಾರೆ. ‘ಹೌ ಡು ಯು ಡು?’ ಎಂಬುದರ ಸಂಕ್ಷಿಪ್ತ ರೂಪ ಅದು. ಅದನ್ನೇ ಬಳಸಿಕೊಂಡು ಸಮಾವೇಶ ನಡೆಸಲಾಗುತ್ತಿದೆ.

50 ಸಾವಿರ ಮಂದಿ ಸೇರುವ ಈ ಸಮಾವೇಶ ದಾಖಲೆಯನ್ನು ಅಮೆರಿಕದಲ್ಲಿ ಬರೆಯಲಿದೆ. ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಹೊರತುಪಡಿಸಿ ಮಿಕ್ಕಾವ ವಿದೇಶಿ ನಾಯಕರಿಗೂ ಇಷ್ಟುಜನ ಸೇರಿದ ನಿದರ್ಶನ ಅಮೆರಿಕದಲ್ಲಿಲ್ಲ.