ವಾಷಿಂಗ್ಟನ್[ಅ.01]: ಅಮೆರಿಕಾದ ಲೂವಿಸ್ ವಿಲ್ಲಾದಲ್ಲಿ ನಡೆದ ಘಟನೆಯೊಂದು ಬಹುತೇಕರನ್ನು ಅಚ್ಚರಿಗೀಡು ಮಾಡಿದೆ. ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ Wave3 ನ್ಯೂಸ್ ವಾಹಿನಿಯ ಪತ್ರಕರ್ತೆಗೆ ವ್ಯಕ್ತಿಯೊಬ್ಬ ಕಿಸ್ ಕೊಟ್ಟಿದ್ದಾನೆ. ಈ ಘಟನೆ ಬಳಿಕ ಗಾಬರಿಗೀಡಾದ ಪತ್ರಕರ್ತೆಗೆ ನಿರೂಪಕ ಧೈರ್ಯ ತುಂಬಿದ್ದು, ನ್ಯೂಸ್ ಬುಲೆಟಿನ್ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೈವ್ ಮುಗಿಸಿದ ಪತ್ರಕರ್ತೆ ತನಗೆ ಮುತ್ತು ಕೊಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿ, ಆತನ ವಿರುದ್ಧ ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದಾರೆ. ಈ ಘಟನೆಯ ಕುರಿತು ಖುದ್ದು ಪತ್ರಕರ್ತೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಘಟನೆಯನ್ನು ನಿಂದಿಸಿರುವ ಪತ್ರಕರ್ತೆ ಸಾರಾ ರಿವೆಸ್ಟ್ '3 ಸೆಕೆಂಡ್ಗಳ ಖ್ಯಾತಿ ನಿಮಗೆ ಸಿಕ್ಕಿದೆ. ಒಂದು ವೇಳೆ ನೀವು ನನ್ನನ್ನು ಮುಟ್ಟದಿದ್ದರೆ ಏನಾಗುತ್ತಿತ್ತು? ಧನ್ಯವಾದ' ಎಂದಿದ್ದಾರೆ. ಈ ಟ್ವೀಟ್ ಜೊತೆಗೆ ವಿಡಿಯೋ ಒಂದನ್ನು ಕೂಡಾ ಸಾರಾ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ನಗುತ್ತಾ ಬಂದು ಸಾರಾರಿಗೆ ಮುತ್ತು ಕೊಟ್ಟು ಹೋಗುತ್ತಾನೆ. ಇದರಿಂದ ಬೆಚ್ಚಿಬಿದ್ದ ಸಾರಾ 'ಇದು ಸರಿಯಲ್ಲ' ಎಂದು ಲೈವ್ ನಲ್ಲಿ ಹೇಳುತ್ತಾರೆ.

ಪತ್ರಕರ್ತೆಯನ್ನು ಮುಟ್ಟಿ ಕಿಸ್ ಮಾಡಿದ ವ್ಯಕ್ತಿ ಹೆಸರು ಎರಿಕ್ ಗುಡ್ ಮೆನ್. ಇನ್ನು ಈ ವಿಚಾರ ಬಹಿರಂಗಗೊಂಡು ಆತನ ಗುರುತು ಪತ್ತೆಯಾಗುತ್ತಿದ್ದ ಬೆನ್ನಲ್ಲೇ ಆತ ಪತ್ರಕರ್ತೆಯ ಬಳಿ ಕ್ಷಮೆ ಯಾಚಿಸಿದ್ದಾನೆ. ಆದರೆ ಅದಕ್ಕೂ ಮೊದಲೇ ಸಾರಾ ಆತನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದರು. 

ಇದಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಸಾರಾ 'ನನ್ನನ್ನು ಮುಟ್ಟಿದ ಹಾಗೂ ಕಿಸ್ ಮಾಡಿದ ವ್ಯಕ್ತಿಯ ಹೆಸರು ಎರಿಕ್ ಗುಡ್ ಮೆನ್. ಆತನ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿದ್ದೇನೆ. ಇಂದು[ಸೆ.26] ಆತ ಕ್ಷಮೆ ಕೋರಿ ಪತ್ರ ಬರೆದಿದ್ದಾನೆ. ಅದನ್ನು ನಾನಿಂದು ವಾಹಿನಿಯಲ್ಲಿ ಓದುತ್ತೇನೆ' ಎಂದಿದ್ದಾರೆ.

ಪತ್ರದಲ್ಲೇನಿದೆ?

ಕ್ಷಮಾಪಣಾ ಪತ್ರ ಬರೆದಿರುವ ಎರಿಕ್ ಗುಡ್ ಮೆನ್ 'ನೀವು ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ, ನಾನು ಬ್ಯಾಚುಲರ್ ಪಾರ್ಟಿ ಮುಗಿಸಿ ಮರಳುತ್ತಿದ್ದೆ. ತಮಾಷೆಗಾಗಿ ನಾನು ನಿಮ್ಮೊಂದಿಗೆ ಹಾಗೆ ನಡೆದುಕೊಂಡೆ. ನನ್ನ ವರ್ತನೆ ಸರಿಯಲ್ಲ. ಆದರೆ ವಿಡಿಯೋ ನೋಡಿದ ಬಳಿಕ ಹಾಗೂ ನಿಮ್ಮ ಹೇಳಿಕೆ ಕೇಳಿದ ಬಳಿಕ ವರದಿಗಾರಿಕೆ ಮಾಡುವುದು ಸುಲಭದ ಮಾತಲ್ಲ ಎಂದೆನಿಸಿತು. ನಿಮ್ಮ ಕೆಲಸಕ್ಕೆ ನಾನು ತೊಡಕುಂಟು ಮಾಡಿದೆ ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದಿದ್ದಾರೆ.