ಮುಂಬೈ[ಸೆ.10]: ರಾಜೀನಾಮೆಯಿಂದ ಹಲವು ನಾಯಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ತಗುಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಮುಂಬೈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉರ್ಮಿಳಾ ಮಾಂತೋಡ್ಕರ್ ಸೋಲುಂಡಿದ್ದರು. ಇದಾದ 6 ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಉರ್ಮಿಳಾ ತಮ್ಮ ಪತ್ರದಲ್ಲಿ 'ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಹಲವಾರು ಬಾರಿ ಪ್ರಯತ್ನಿಸಿ ಮೇ 16ರಂದು ನೀಡಿದ್ದ ಪತ್ರ ಸಂಬಂಧ, ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಲಿಂದ್ ದೇವ್ರಾ ಯಾವುದೇ ತನಿಖೆ ನಡೆಸಿರಲಿಲ್ಲ. ಅಂದು ನಾನು ಮೊದಲ ಬಾರಿ ರಾಜೀನಾಮೆ ಬಗ್ಗೆ ಚಿಂತಿಸಿದ್ದೆ. ಇದಾದ ಬಳಿಕ ನನ್ನನ್ನು ದೂರವಿಡುವ ಸಲುವಾಗಿ ಗೌಪ್ಯವಾಗಿರಬೇಕಿದ್ದ ನಾನು ಬರೆದ ಪತ್ರವನ್ನು ಮಾಧ್ಯಮಗಳಲ್ಲಿ ಲೀಕ್ ಮಾಡಲಾಯ್ತು. ಇದು ಬಹುದೊಡ್ಡ ವಿಶ್ವಾಸ ದ್ರೋಹವಾಗಿತ್ತು ' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ಇಷ್ಟಾದರೂ ಪಕ್ಷದ ಯಾವೊಬ್ಬ ಸದಸ್ಯರೂ ಕ್ಷಮೆ ಯಾಚಿಸಲಿಲ್ಲ. ಅಲ್ಲದೇ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಉತ್ತರ ಮುಂಬೈನಲ್ಲಿ ಸೋಲನುಭವಿಸಲು ಕಾರಣಕರ್ತರಾಗಿದ್ದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುವ ಬದಲು ಅಂತಹವರಿಗೆ ಉನ್ನತ ಸ್ಥಾನ ನೀಡಿ ಗೌರವಿಸಲಾಯಿತು' ಎಂದು ದೂರಿದ್ದಾರೆ.