ಮಧ್ಯಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಜಟಿಲತೆ ತಂದಿಟ್ಟಿದ್ದ ಸುರಂಗ ಮಾರ್ಗದ ಜೋಡಣೆ ಕಾರ್ಯ ಸೋಮವಾರ ನಡೆಯಲಿದೆ.
ಚಿತ್ರದುರ್ಗ : ಮಧ್ಯಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಜಟಿಲತೆ ತಂದಿಟ್ಟಿದ್ದ ಸುರಂಗ ಮಾರ್ಗದ ಜೋಡಣೆ ಕಾರ್ಯ ಸೋಮವಾರ ನಡೆಯಲಿದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ನೀರಾವರಿ ಸುರಂಗ ಮಾರ್ಗವಾಗಿದ್ದು, ಜನವರಿ ವೇಳೆಗೆ ಈ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕವಾಗಿ ನೀರು ಹಾಯಿಸುವ ಕಾರ್ಯ ನೆರವೇರಲಿದೆ.
ಮಹತ್ವಾಕಾಂಕ್ಷೆಯ ಈ ನೀರಾವರಿ ಯೋಜನೆಯನ್ನು ಮೂರು ಹಂತದ ಕಾಮಕಾರಿಗಳಾಗಿ ವಿಂಗಡಣೆ ಮಾಡಲಾಗಿದೆ. ತುಂಗಾ ನದಿಯಿಂದ ಭದ್ರಾಗೆ ಲಿಫ್ಟ್ ಮಾಡುವ ಮೂಲಕ ನೀರು ಹಾಯಿಸುವುದು, ಭದ್ರಾದಿಂದ ಸುರಂಗ ಮಾರ್ಗದವರೆಗೆ ಲಿಫ್ಟ್ ಮಾಡುವುದು ಹಾಗೂ ಸುರಂಗ ಮಾರ್ಗ ನಿರ್ಮಾಣ ಸೇರಿ ಮೂರು ಹಂತದ ಕಾಮಗಾರಿ ಅನುಷ್ಠಾನ ಮಾಡಬೇಕಾಗಿದೆ.
ಪ್ಯಾಕೇಜ್ 3ರಲ್ಲಿ ಸುಮಾರು 300 ಕೋಟಿ ರು. ವೆಚ್ಚದ 7.039 ಕಿ.ಮೀ. ಉದ್ದದ ಸುರಂಗ ಮಾರ್ಗದ ಕಾಮಗಾರಿ ಪ್ರಮುಖವಾಗಿದೆ. 8 ಮೀಟರ್ ವ್ಯಾಸದ, 150 ಅಡಿ ಆಳದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ನರಸೀಪುರ ಹಾಗೂ ಅಜ್ಜಂಪುರ ಎರಡೂ ಕಡೆಯಿಂದ ಸುರಂಗ ಕಾಮಗಾರಿ ನಡೆಯುತ್ತಿದ್ದು, ಈ ಎರಡೂ ಸುರಂಗಗಳು ಸೋಮವಾರ ಸಂಧಿಸಲಿವೆ. ಇದರೊಂದಿಗೆ ಸುರಂಗ ಜೋಡಣೆಯ ಮಹತ್ವದ ಕಾರ್ಯ ನಡೆಯಲಿದೆ. ಪ್ರತಿಷ್ಠಿತ ಮೆ. ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಎನ್‌ಸಿ) ಕಂಪನಿಯವರು ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉತ್ತಮ ಗುಣಮಟ್ಟ, ಸುರಕ್ಷತಾ ಕ್ರಮಗಳು ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದಾರೆ.
ಏನಿದು ಭದ್ರಾ ಮೇಲ್ದಂಡೆ ಯೋಜನೆ?
ಬರಪೀಡಿತ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ 1,07,265 ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳ 156 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ಸೂಕ್ಷ್ಮ ನೀರಾವರಿ ಪದ್ಧತಿ ಮೂಲಕ 29 ಟಿಎಂಸಿ ಬಳಕೆ ಉದ್ದೇಶವಿದೆ. ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ 5,67,022 ಎಕರೆ (2,25,515 ಹೆಕ್ಟೇರ್) ಭೂ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50ರಷ್ಟನ್ನು ತುಂಬಿಸಲು ಯೋಜಿಸಲಾಗಿದೆ. ಯೋಜನೆಗೆ 2003ರಲ್ಲಿ .2813 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ರೈತರ ಅಡೆತಡೆ ಹಾಗೂ ಸುರಂಗ ಮಾರ್ಗ ಬದಲಾವಣೆಯಿಂದ ಕಾಮಗಾರಿ ವಿಳಂಬವಾಯಿತು. ಹೀಗಾಗಿ .12,340 ಕೋಟಿಗಳ ಪರಿಷ್ಕೃತ ಯೋಜನಾ ವರದಿ ಸಿದ್ಧವಾಗಿ 2015ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಏಷ್ಯಾದ ಮೊದಲ ಸುರಂಗ ನಾಲೆ ಮಂಡ್ಯದ ಹುಲಿಕೆರೆ ಟನಲ್
ಕೃಷ್ಣರಾಜಸಾಗರ ಜಲಾಶಯದ ವಿಶ್ವೇಶ್ವರಯ್ಯ ನಾಲೆಗೆ 26ನೇ ಮೈಲಿಯಿಂದ ಆರಂಭವಾಗುವ ಹುಲಿಕೆರೆ ಸುರಂಗ ಮಾರ್ಗ 28.5ನೇ ಮೈಲಿವರೆಗೆ ಸಾಗಿದೆ. ಇದು 2.8 ಕಿ.ಮೀ. ಉದ್ದದ ಸುರಂಗ ನಾಲೆಯಾಗಿದೆ. ಇದು ಏಷ್ಯಾದ ಮೊದಲ ನೀರಾವರಿ ಸುರಂಗ ನಾಲೆಯಾಗಿದೆ. ‘ಹುಲಿಕೆರೆ ಟನಲ್’ ಎಂದೇ ಪ್ರಸಿದ್ಧಿಯಾಗಿರುವ ಈ ಸುರಂಗ ನಾಲೆ 6 ಅಡಿ ಅಗಲ ಇದೆ. 1927ರಲ್ಲಿ ವಿಶ್ವೇಶ್ವರಯ್ಯ ನಾಲೆಗೆ ಭೂಮಿ ಪೂಜೆ ನೆರವೇರಿಸಲಾಗಿತ್ತು. 1932ರಲ್ಲಿ ಕಾಮಗಾರಿ ಅಂತ್ಯವಾಗಿತ್ತು. ಈ ಸುರಂಗವನ್ನು ಕಬ್ಬಿಣ, ಸೈಜುಗಲ್ಲು, ಸುರಕಿ ಗಾರೆಗಳಿಂದ ನಿರ್ಮಿಸಲಾಗಿದೆ. ಮೃದು ಮಣ್ಣು ಇರುವ ಕಡೆ ಕಲ್ಲು ಮತ್ತು ಸುರಕಿ ಗಾರೆ ಬಳಕೆಯಾಗಿದೆ.
ಬಾಗೂರು-ನವಿಲೆ ಏಷ್ಯಾದ ಅತಿದೊಡ್ಡ ಸುರಂಗ ನಾಲೆ
ಹೇಮಾವತಿ ನದಿಯಿಂದ ಶಿಂಷಾ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ಹಾಸನದ ಬಾಗೂರು-ನವಿಲೆ ಯೋಜನೆಯು ರಾಜ್ಯದಲ್ಲಷ್ಟೇ ಅಲ್ಲದೇ ಏಷ್ಯಾದಲ್ಲೇ ಅತಿದೊಡ್ಡ ಸುರಂಗ ನೀರಾವರಿ ಕಾಲುವೆ ಎಂದೇ ಖ್ಯಾತಿಗಳಿಸಿದೆ. ಸುಮಾರು 9 ಕಿ.ಮೀ. ಉದ್ದದ ಈ ಕಾಲುವೆಯನ್ನು ಭೂಮಿಯಿಂದ 75ರಿಂದ 200 ಅಡಿ ಆಳದಲ್ಲಿ ಕೊರೆಯಲಾಗಿದೆ.
ಸುರಂಗ ಮಾರ್ಗ ನಿರ್ಮಾಣದಿಂದಾಗಿ ಈ ಭಾಗದ ಅಂತರ್ಜಲ ಮಟ್ಟಕುಸಿಯುತ್ತದೆ ಎಂಬ ಭೀತಿ ವ್ಯಕ್ತಪಡಿಸಿ ತರೀಕೆರೆ ಭಾಗದ ರೈತರು ಪಥ ಬದಲಾವಣೆಗೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಸಲಹೆಗಾರ ಡಿ.ಎನ್.ದೇಸಾಯಿ ನೇತೃತ್ವದಲ್ಲಿ ಸಮಿತಿ ರಚಿಸಿ, ಅಂತರ್ಜಲ ಕುಸಿತ ಹಾಗೂ ಪರ್ಯಾಯಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿತ್ತು.
ಸಮಿತಿಯು ಕಾರ್ಯಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಅಧ್ಯಯನ ಮಾಡಿ 2010ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸುರಂಗ ಮಾರ್ಗದ ಮೇಲ್ಭಾಗದಲ್ಲಿ ಮತ್ತು ಸುತ್ತಮುತ್ತ 20150 ಹೆಕ್ಟೇರ್ ಜಮೀನಿಗೆ ಹನಿ ನೀರಾವರಿ ಒದಗಿಸುವುದು ಮತ್ತು 79 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಲು ಸಲಹೆ ನೀಡಿತ್ತು.
ಒಟ್ಟು 7.039 ಕಿಮೀ ಉದ್ದದ ಸುರಂಗ, 2.881 ಕಿ.ಮೀ. ಉದ್ದದ ಆಗಮನ ಮತ್ತು ನಿರ್ಗಮನ ಕಾಲುವೆ ಹಾಗೂ 7 ಸಿ.ಡಿ. ಕಾಮಗಾರಿಗಳನ್ನು 4 ಫೇಸ್‌ಗಳಿಂದ ನಿರ್ವಹಿಸಲು ಯೋಜಿಸಲಾಗಿತ್ತು. ಆಗಮನ-ಫೇಸ್ 1, ಶಾಫ್ಟ್ ಮೂಲಕ ಫೇಸ್ 2 ಮತ್ತು ಫೇಸ್ 3, ನಿರ್ಗಮನ ಫೇಸ್ 4 ಮೂಲಕ ಕಾರ್ಯಗತಗೊಳಿಸಲಾಗಿದೆ. ಒಟ್ಟು 7.039 ಕಿಮೀ ಉದ್ದದ ಸುರಂಗದ ಅಗೆತದ ಕಾರ್ಯ ಹಾಗೂ 5.884 ಕಿಮೀ ಸುರಂಗ ಲೈನಿಂಗ್ ಪೂರ್ಣಗೊಂಡಿದೆ.
ಸುರಂಗ ಮಾರ್ಗ ನರಸೀಪುರದ ಬಳಿ ಆರಂಭವಾಗಿ ಅಜ್ಜಂಪುರದ ಬಳಿ ಮುಕ್ತಾಯಗೊಳ್ಳುತ್ತದೆ. ಆಗಮನ ಹಾಗೂ ನಿರ್ಗಮವನ್ನು ಯಶಸ್ವಿಯಾಗಿ ಜೋಡಣೆ ಮಾಡಲಾಗಿದೆ.
