ನವದೆಹಲಿ :  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು,  ಬಿಹಾರದಲ್ಲಿ ಸೀಟು ಹಂಚಿಕೆ ವಿಚಾರಕ್ಕೆ ಅಸಮಾಧಾನಗೊಂಡಿರುವ ಲೋಕ ಸಮತಾ ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಉಪೇಂದ್ರ ಕುಶ್ವಾ ಎನ್ ಡಿಎ ಮೈತ್ರಿ ತೊರೆಯುವ ವಿಚಾರ ಇನ್ನೂ ಕೂಡ ಸೀಕ್ರೇಟ್ ಆಗಿಯೇ ಉಳಿದಿದೆ. 

ಎನ್ ಡಿಎ ಒಕ್ಕೂಟದಲ್ಲಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ  ಸದ್ಯ ಹೊರಬರಲಿದೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಬಿಜೆಪಿ ಶಾಕ್ ನೀಡುತ್ತದೆಯೇ ಎನ್ನುವುದಕ್ಕೆ ಇನ್ನೂ ಯಾವುದೇ ಉತ್ತರ ದೊರೆತಿಲ್ಲ.  

ಎಲ್ ಎಸ್ ಪಿ ಮುಖಂಡ  ಉಪೇಂದ್ರ ಕುಶ್ವಾ ಅವರು ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಖಾತೆ ಸಚಿವ ಸ್ಥಾನ ತೊರೆದು,  ಕೇಸರಿಪಡೆಯಿಂದ ಹೊರಬರುತ್ತಾರಾ ಎನ್ನುವ ವಿಚಾರ  ಭಾರೀ ಕುತೂಹಲ ಮೂಡಿಸಿದೆ. 

ಈ ಬಗ್ಗೆ ಗುರುವಾರ  ಚಂಪಾರಣ್ ನ ಮೋತಿಹಾರಿ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಸ್ವತಃ ಕುಶ್ವಾ  ಅವರೇ ಪ್ರತಿಕ್ರಿಯಿಸಿದ್ದು, ಗೆಳೆತನಕ್ಕೆ ಒಳ್ಳೆ ಬೆಲೆ ಕೊಡದಿದ್ದಲ್ಲಿ ದೂರವೇ ಉಳಿಯಬೇಕಾಗುತ್ತದೆ.  ಇದಕ್ಕೆ ಯಾವುದೇ ರೀತಿ ಕ್ಷಮೆಯೂ ಕೂಡ ಇರದು. ಈಗ ಯುದ್ಧ ಭೂಮಿ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಒಕ್ಕೂಟದಿಂದ ಹೊರಬರುವ ಬಗ್ಗೆ ಸುಳಿವು ನೀಡಿದ್ದಾರೆ.  

ನವೆಂಬರ್ 30ರಂದೆ ಉಪೇಂದ್ರ ಕುಶ್ವಾ ಎನ್ ಡಿಎ ಒಕ್ಕೂಟಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.  ಆದರೆ ಇನ್ನೂ ಈ ಬಗ್ಗೆ ಕುಶ್ವಾ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.