ಶ್ರೇಷ್ಠಾ ಠಾಕೂರ್ ಅವರ ವರ್ತನೆಯಿಂದ ಸ್ಥಳೀಯ ಬಿಜೆಪಿ ಮುಖಂಡರ ಘನತೆಗೆ ಧಕ್ಕೆ ಬಂದಿದ್ದು ಮಾತ್ರವಲ್ಲದೇ ಸಿಎಂ ಯೋಗಿ ಹಾಗೂ ಇತರ ಹಿರಿಯ ಬಿಜೆಪಿ ಮುಖಂಡರ ಬಗ್ಗೆಯೂ ಕೇವಲವಾಗಿ ಮಾತನಾಡಿದರು. ಇದರಿಂದ ಪಕ್ಷದ ವರ್ಚಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಕೂಡಲೇ ಪೊಲೀಸ್ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜನಪ್ರತಿನಿಧಿಗಳ ತಂಡವು ಹೈಕಮಾಂಡ್ ಮೇಲೆ ಒತ್ತಡ ಹೇರಿತು.
ನವದೆಹಲಿ(ಜುಲೈ 02): ಗೂಂಡಾಗಿರಿ ತೋರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಜೈಲಿಗೆ ಅಟ್ಟುವ ಧೈರ್ಯ ತೋರಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಉತ್ತರಪ್ರದೇಶ ಸರಕಾರ ಟ್ರಾನ್ಸ್'ಫರ್ ಶಿಕ್ಷೆ ನೀಡಿದೆ. ಬುಲಂದ್'ಶಹರ್ ಜಿಲ್ಲೆಯ ಸ್ಯಾನಾ ಸರ್ಕಲ್'ನ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ ಅವರನ್ನು ಬಹರೇಚ್ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಘಟನೆ ಆಗಿದ್ದೇನು?
ಶ್ರೇಷ್ಠಾ ಮತ್ತಿತರ ಪೊಲೀಸರು ಜೂನ್ 22ರಂದು ಸ್ಯಾನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಪ್ರಮೋದ್ ಕುಮಾರ್ ಎಂಬಾತನನ್ನು ಪೊಲೀಸರು ತಡೆದು 200 ರೂಪಾಯಿ ದಂಡ ವಿಧಿಸುತ್ತಾರೆ. ಬಿಜೆಪಿ ಮುಖಂಡನೆಂದು ಹೇಳಿಕೊಂಡ ಪ್ರಮೋದ್ ಕುಮಾರ್ ಮತ್ತು ಪೊಲೀಸ್ ಅಧಿಕಾರಿ ಶ್ರೇಷ್ಠಾ ನಡುವೆ ವಾಗ್ವಾದವಾಗುತ್ತದೆ. ಬಳಿಕ ಪ್ರಮೋದ್ ಕುಮಾರ್ ದೂರವಾಣಿ ಕರೆ ಮಾಡಿದ ಬಳಿಕ ನಗರ ಬಿಜೆಪಿ ಅಧ್ಯಕ್ಷ ಮುಕೇಶ್ ಭಾರದ್ವಜ್ ಸೇರಿದಂತೆ ಕೆಲ ಸ್ಥಳೀಯ ಬಿಜೆಪಿ ಮುಖಂಡರು ಧಾವಿಸಿ ಬರುತ್ತಾರೆ. ಆ ನಂತರ ಪೊಲೀಸರಿಗೂ ಬಿಜೆಪಿ ಮುಖಂಡರಿಗೂ ತೀವ್ರ ವಾಗ್ವಾದ, ತಳ್ಳಾಟಗಳಾಗುತ್ತವೆ. ಸರಕಾರೀ ಅಧಿಕಾರಿಯ ಕರ್ತವ್ಯ ಪಾಲನೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಶ್ರೇಷ್ಠಾ ಠಾಕೂರ್ ಅವರು ಐವರು ಬಿಜೆಪಿ ಮುಖಂಡರನ್ನು ಬಂಧಿಸಿ ಲಾಕಪ್'ಗೆ ಹಾಕುತ್ತಾರೆ.
ಪ್ರತಿಷ್ಠೆಗೆ ಧಕ್ಕೆ:
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಮಹಿಳಾ ಪೊಲೀಸ್ ಅಧಿಕಾರಿ ಯಾವುದೇ ಮುಲಾಜು ನೋಡದೇ ಪಕ್ಷದವರನ್ನು ಜೈಲಿಗೆ ಅಟ್ಟಿದ್ದು ಸ್ಥಳೀಯ ಬಿಜೆಪಿ ಮುಖಂಡರಿಗೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಒಬ್ಬ ಸಂಸದ ಹಾಗೂ 11 ಶಾಸಕರ ತಂಡವೊಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿತು. ಶ್ರೇಷ್ಠಾ ಠಾಕೂರ್ ಅವರ ವರ್ತನೆಯಿಂದ ಸ್ಥಳೀಯ ಬಿಜೆಪಿ ಮುಖಂಡರ ಘನತೆಗೆ ಧಕ್ಕೆ ಬಂದಿದ್ದು ಮಾತ್ರವಲ್ಲದೇ ಸಿಎಂ ಯೋಗಿ ಹಾಗೂ ಇತರ ಹಿರಿಯ ಬಿಜೆಪಿ ಮುಖಂಡರ ಬಗ್ಗೆಯೂ ಕೇವಲವಾಗಿ ಮಾತನಾಡಿದರು. ಇದರಿಂದ ಪಕ್ಷದ ವರ್ಚಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಕೂಡಲೇ ಪೊಲೀಸ್ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜನಪ್ರತಿನಿಧಿಗಳ ತಂಡವು ಹೈಕಮಾಂಡ್ ಮೇಲೆ ಒತ್ತಡ ಹೇರಿತು. ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದ ಸಿಎಂ ಯೋಗಿ ಆದಿತ್ಯನಾಥ್ ಅವರು ಶ್ರೇಷ್ಠಾ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲು ನಿರ್ಧರಿಸಿದರೆನ್ನಲಾಗಿದೆ.
