ಲಕ್ನೋ[ಜ.12]: ವಿವಿಧ ಪ್ರಕರಣಗಳಲ್ಲಿ ಸಂಭವಿಸಿದ ಅಜಾರುಕತೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಸುದ್ದಿಯಾಗುತ್ತದೆ. ಇದೀಗ ಮತ್ತೊಮ್ಮೆ ಯುಪಿ ಪೊಲೀಸರು ವರ್ಗಾವಣೆ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ ಸುದ್ದಿಯಾಗಿದ್ದಾರೆ. ವರ್ಗಾವಣೆ ಪಟ್ಟಿಯಲ್ಲಿ ತಿಂಗಳ ಹಿಂದೆ ಸಾವನ್ನಪ್ಪಿರುವ ಡಿವೈಎಸ್‌ಪಿ ಸತ್ಯ ನರೇನ್ ಸಿಂಗ್ ಹೆಸರನ್ನೂ ಸೇರಿಸಿ ವಿವಾದ ಸೃಷ್ಟಿಸಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಡಿಜಿಪಿ ಒಪಿ ಸಿಂಗ್ ಕ್ಷಮೆಯಾಚಿಸಿದ್ದು, ಇಂತಹ ಎಡವಟ್ಟು ಮಾಡಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ಕಳೆದ ಕೆಲ ಸಮಯದಿಂದ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಾದದಲ್ಲಿದೆ. ಕೆಲ ತಿಂಗಳಿನ ಹಿಂದಷ್ಟೇ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬರು ಲಕ್ನೋದಲ್ಲಿ ಆ್ಯಪಲ್ ಕಂಪೆನಿಯ ಮ್ಯಾನೇಜರ್ ಒಬ್ಬರನ್ನು ಗುಂಡಿಟ್ಟು ಕೊಂದಿದ್ದರು. ವಿವೇಕ್ ತಿವಾರಿ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಇದು ಎನ್ ಕೌಂಟರ್ ಅಲ್ಲ, ಪ್ರಕರಣದ ತನಿಖೆ ನಡೆಸುತ್ತೇವೆ. ಅಗತ್ಯ ಬಿದ್ದರೆ ಸಿಬಿಐ ತನಿಖೆಗೂ ಆದೇಶಿಸುತ್ತೇವೆ ಎಂಬ ಸ್ಪಷ್ಟನೆ ನೀಡಿದ್ದರು. 

ಹೀಗಿದ್ದರೂ ವಿವೇಕ್ ತಿವಾರಿಯವರ ಪತ್ನಿ ಕಲ್ಪನಾರವರು ಸಿಎಂ ಯೋಗಿಯವರಿಗೆ ಪತ್ರ ಬರೆದು ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದರು. ಅಲ್ಲದೇ ಪರಿಹಾರವಾಗಿ 1 ಕೋಟಿ ರೂಪಾಯಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ನೀಡಬೇಕೆಂದು ಮನವಿ ಮಾಡಿದ್ದರು. ತನ್ನ ಗಂಡನನ್ನು ಗುಂಡು ಹಾರಿಸಿ ಕೊಂದ ಬಳಿಕ ಲಕ್ನೋ ಪೊಲೀಸರು ಅವರನ್ನು ಚರಿತ್ರಹೀನರೆಂದು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದರು. ಇದೇ ವೇಳೆ ಗಾಡಿ ನಿಲ್ಲಿಸದಿದ್ದರೆ ಫೈರಿಂಗ್ ಮಾಡುವ ಅಧಿಕಾರ ಪೊಲೀಸರಿಗೆ ನೀಡಿದ್ದು ಯಾರು? ಎಂದೂ ಪ್ರಶ್ನಿಸಿದ್ದರು. ಈ ಮೂಲಕ ಯೋಗಿ ಸರ್ಕಾರದ ಬಳಿ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದರು.

ಈ ಪ್ರಕರಣದ ಬೆನ್ನಲ್ಲೇ ವರ್ಗಾವಣೆ ಪಟ್ಟಿಯಲ್ಲಿ, ತಿಂಗಳ ಹಿಂದೆ ಸಾವನ್ನಪ್ಪಿರುವ ಡಿವೈಎಸ್ಪಿ ಸತ್ಯ ನರೇನ್ ಸಿಂಗ್ ಹೆಸರು ನಮೂದಿಸಿದ್ದಾರೆ. ಈ ವಿಚಾರ ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.