ಉತ್ತರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದೇವೆ ಎಂದು ಆಡಳಿತಾರೂಢ ಬಿಜೆಪಿ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದರೆ ಫಲಿತಾಂಶ ಪರಿಶೀಲಿಸಿದಾಗ ಈ ಚುನಾವಣೆಯಲ್ಲಿ ಬಿಜೆಪಿಗಿಂತ ಪಕ್ಷೇತರರೇ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿರುವ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ.

ಲಖನೌ(ಡಿ.4): ಉತ್ತರಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ವಿಜಯ ಸಾಧಿಸಿದ್ದೇವೆ ಎಂದು ಆಡಳಿತಾರೂಢ ಬಿಜೆಪಿ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ಆದರೆ ಫಲಿತಾಂಶ ಪರಿಶೀಲಿಸಿದಾಗ ಈ ಚುನಾವಣೆಯಲ್ಲಿ ಬಿಜೆಪಿಗಿಂತ ಪಕ್ಷೇತರರೇ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿರುವ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ. ಆದರೆ ರಾಜಕೀಯ ಪಕ್ಷಗಳನ್ನು ಪರಿಗಣಿಸಿದರೆ ಬಿಜೆಪಿ ಉಳಿದೆಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳಿಸಿದೆ.

16 ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನ ಗೆದ್ದಿದ್ದು ನಿಜ. ಆದರೆ ನಗರ ಪಂಚಾಯತ್, ನಗರ ಪಾಲಿಕಾ ಪರಿಷದ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು ಬಿಜೆಪಿಗಿಂತ ಹೆಚ್ಚು ಸ್ಥಾನ ಗಳಿಸಿದ್ದಾರೆ. ನಗರ ಪಂಚಾಯತ್’ನ 5433 ಸದಸ್ಯ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು 3875 ಸ್ಥಾನಗಳಲ್ಲಿ (ಶೇ.71.31) ಗೆದ್ದಿದ್ದಾರೆ. ಬಿಜೆಪಿ ಕೇವಲ 664 ಸ್ಥಾನ (ಶೇ.12.22)ಗಳಲ್ಲಷ್ಟೇ ಜಯ ಸಾಧಿಸಿದೆ. ಸಮಾಜವಾದಿ ಪಕ್ಷ 453 (ಶೇ.8.34) ಹಾಗೂ ಬಿಎಸ್ಪಿ 218 (ಶೇ.4.01) ಸೀಟುಗಳನ್ನು ಗಳಿಸಿಕೊಂಡಿವೆ. ನಗರ ಪಂಚಾಯತ್’ಗಳಲ್ಲಿ 438 ಮುಖ್ಯಸ್ಥ ಹುದ್ದೆಗಳಿದ್ದು, ಅದರಲ್ಲಿ 182 (ಶೇ.41.55) ಸ್ಥಾನಗಳು ಪಕ್ಷೇತರರ ಪಾಲಾಗಿವೆ. 100 (ಶೇ.22.83) ಬಿಜೆಪಿಗೆ ಸಿಕ್ಕಿವೆ. ಇನ್ನು ನಗರ ಪಾಲಿಕಾ ಪರಿಷದ್’ನ 5260 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರು 3380 (ಶೇ.64.25) ಸೀಟು ಗಳಿಸಿದ್ದಾರೆ.

ಬಿಜೆಪಿ 922 (ಶೇ.17.53) ಸ್ಥಾನಗಳಲ್ಲಷ್ಟೇ ಜಯ ಸಾಧಿಸಿದೆ. 1299 ನಗರಪಾಲಿಕೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 596 ಹಾಗೂ ಪಕ್ಷೇತರರು 224 ಸೀಟು ಗಳಿಸಿದ್ದಾರೆ. ವಿವಿಧ ಪಕ್ಷಗಳಿಂದ ಟಿಕೆಟ್ ವಂಚಿತರಾದವರು ಪಕ್ಷೇತರರಾಗಿ ಸ್ಪರ್ಧಿಸಿದ್ದು, ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳು ಸ್ಪರ್ಧಿಸದೇ ಇದ್ದಿದ್ದು ಮತ್ತು ಬಹುತೇಕ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷಕ್ಕಿಂತ ಸ್ಥಳೀಯ ಜನಪ್ರತಿನಿಧಿಗಳೇ ಹೆಚ್ಚು ಪ್ರಭಾವಶಾಲಿಯಾಗಿರುವುದೇ ಈ ರೀತಿ ಫಲಿತಾಂಶ ಹೊರಬೀಳಲು ಕಾರಣ ಎನ್ನಲಾಗಿದೆ.