ಲಖನೌ[ಡಿ.02]: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌(ಅಲಹಾಬಾದ್‌)ನಲ್ಲಿ 2019ರ ಜನವರಿ ಮತ್ತು ಮಾರ್ಚ್ ಅವಧಿಯಲ್ಲಿ ಯಾವುದೇ ವಿವಾಹ ಕಾರ್ಯಕ್ರಮ ಆಯೋಜಿಸದಂತೆ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ಹೊರಡಿಸಿದೆ.

ಈ ಅವಧಿಯಲ್ಲಿ ನಗರದಲ್ಲಿ ಅದ್ಧೂರಿ ಕುಂಭಮೇಳ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ, ಪ್ರಯಾಗ್‌ರಾಜ್‌ ಸೇರಿದಂತೆ ಸುತ್ತಮುತ್ತಲ ನಗರಗಳ ಕಲ್ಯಾಣ ಮಂಟಪಗಳು ಹಾಗೂ ಇತರೆ ಹಾಲ್‌ಗಳನ್ನು, ಭಕ್ತರ ವಾಸ್ತವ್ಯಕ್ಕೆಂದು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಹೀಗಾಗಿ ಈಗಾಗಲೇ ನಗರದಲ್ಲಿ ಮದುವೆ ಆಯೋಜಿಸಲು ನಿರ್ಧರಿಸಿದ್ದವರು, ಅದನ್ನು ಮುಂದೂಡಬೇಕು, ಇಲ್ಲವೇ ಬೇರೆ ನಗರಗಳಿಗೆ ವರ್ಗಾಯಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಅಲ್ಲದೆ ಯಾವುದೇ ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್‌ ಆಗಿದ್ದರೆ ಅದನ್ನು ರದ್ದುಪಡಿಸುವಂತೆಯೂ ಕಲ್ಯಾಣ ಮಂಟಪದ ಮಾಲೀಕರಿಗೆ ಸೂಚಿಸಿದೆ. ಕುಂಭ ಮೇಳಕ್ಕೆ ಕೋಟ್ಯಂತರ ಜನ ಆಗಮಿಸುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. 2019ರ ಜ.15ರಿಂದ ಮಾ.4ರವರೆಗೆ ಕುಂಭಮೇಳದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.