ಥಾಣೆ,[ಡಿ.09]: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್​ ಅತವಾಲೆ ಅವರನ್ನು ಎಳೆದಾಡಿ ಹಲ್ಲೆ ಮಾಡಿರುವ ಘಟನೆ  ಮಹಾರಾಷ್ಟ್ರದ ಅಂಬೇರ್​ನಾಥ್​ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮದಾಸ್ ಅತವಾಲೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಲೇ ಅವರತ್ತ ನುಗ್ಗಿ ಬಂದ ಪ್ರವೀಣ್​ ಗೋಸಾವಿ ಎಂಬ ಯುವಕ, ಸಚಿವರನ್ನ ಕೆಳಗೆ ತಳ್ಳಿ, ಬಳಿಕ ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸಚಿವರ ಮೇಲೆ ಹಲ್ಲೆ ನಡೆಯುತ್ತಲೇ ಅವರ ನೆರವಿಗೆ ಧಾವಿಸಿದ ಅವರ ಬೆಂಬಲಿಗರು ಮತ್ತು ಅಂಗರಕ್ಷಕರು, ಯುವಕ ಪ್ರವೀಣ್​ನನ್ನು ಪಕ್ಕಕ್ಕೆ ಎಳೆದು ಬೀಳಿಸಿ, ಹೊಡೆದಿದ್ದಾರೆ. 

 ಆ ನಂತರ ಸಚಿವರ ಬೆಂಬಲಿಗರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಸಚಿವರ ಮೇಲೆ ಹಲ್ಲೆ ನಡೆಸಿದ ಯುವಕ ಪ್ರವೀಣ್​ ಅವರದ್ದೇ ಪಕ್ಷವಾದ ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾದ (ಆರ್​ಪಿಐ) ಕಾರ್ಯಕರ್ತ ಎನ್ನಲಾಗಿದ್ದು, ಪ್ರವೀಣ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.