ಬೆಂಗಳೂರು (ಫೆ.09): ಸಂಸತ್ತು ಅಥವಾ ವಿಧಾನಮಂಡಲ ಕಲಾಪ ನಡೆಯುವಾಗ ಸದಸ್ಯರು ಕೆಲವೊಮ್ಮೆ ನಿದ್ದೆಗೆ ಜಾರುವುದು ಹೊಸ ಸಂಗತಿಯೇನೂ ಅಲ್ಲ. ಆದರೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ.೧ರಂದು ಕೇಂದ್ರ ಬಜೆಟ್ ಮಂಡಿಸುವಾಗ ಸಚಿವರಾದ ಸಚಿವ ನಿತಿನ್ ಗಡ್ಕರಿ ಹಾಗೂ ಡಾ. ಹರ್ಷವರ್ಧನ್ ಅವರು ನಿದ್ದೆ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಜೆಟ್ ಮಂಡನೆಯ ವೇಳೆ ಗಡ್ಕರಿ ಹಾಗೂ ಹರ್ಷವರ್ಧನ್ ಅವರು ನಿದ್ದೆಗೆ ಜಾರಿರುವುದನ್ನು ಕೆಂಪು ವೃತ್ತದಲ್ಲಿ ತೋರಿಸಿರುವ ಚಿತ್ರವೊಂದನ್ನು ಚಿತ್ರ ನಿರ್ಮಾಪಕ ರಾಕೇಶ್ ಶರ್ಮಾ  ಟ್ವೀಟರ್‌'ನಲ್ಲಿ ಷೇರ್ ಮಾಡಿದ್ದರು. ಆದರೆ, ಬಜೆಟ್  ಮಂಡನೆಯ ಸಂಪೂರ್ಣ ವಿಡಿಯೋವನ್ನು ಪರಿಶೀಲಿಸಿದ ವೇಳೆ ಎಲ್ಲಿಯೂ ಸಚಿವರು ನಿದ್ದೆಗೆ ಜಾರಿರುವುದು ಕಂಡು ಬಂದಿಲ್ಲ. ಜೇಟ್ಲಿ ಅವರು ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ 11 ಗಂಟೆ 3 ನಿಮಿಷಕ್ಕೆ ಸ್ಕ್ರೀನ್‌ಶಾಟ್ ತೆಗೆದು ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.

ಜೇಟ್ಲಿ ಅವರು ಭಾಷಣ ಆರಂಭಿಸುತಿದ್ದಂತೆ ಸದಸ್ಯರೆಲ್ಲರೂ ಮೇಜು ತಟ್ಟಿ ಸ್ವಾಗತಿಸುತ್ತಾರೆ. ಆದರೆ, ಈ ವೇಳೆ ಗಡ್ಕರಿ ಸ್ವಲ್ಪ ಓರೆಯಾಗಿ ಕುಳಿತಿದ್ದು ಮತ್ತು ಹರ್ಷವರ್ಧನ್ ಕಣ್ಣರೆಪ್ಪೆಯನ್ನು ಮುಚ್ಚಿದ ಕ್ಷಣವೇ ಸ್ಕ್ರೀನ್‌ಶಾಟ್ ತೆಗೆಯಲಾಗಿದೆ. ಆದರೆ, ಗಡ್ಕರಿ ಮತ್ತು ಹರ್ಷವರ್ಧನ್ ಅವರು ನಿದ್ದೆ ಮಾಡಿದ್ದಾರೆ ಎಂಬ ಆರೋಪ ನಿರಾಕರಿಸಿದ್ದಾರೆ.