Asianet Suvarna News Asianet Suvarna News

ರಾಜೀನಾಮೆ ಪರ್ವದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಶಾ ಸಂದೇಶ

ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ರಾಜೀನಾಮೆ ಪರ್ವದ ನಡುವೆ ಈ ಸಂದೇಶ ಕುತೂಹಲ ಮೂಡಿಸಿದೆ. 

Union Home Minister Amit Shah Message To Karnataka BJP Leaders
Author
Bengaluru, First Published Jul 3, 2019, 7:34 AM IST

ಬೆಂಗಳೂರು [ಜು.3] :  ಆಡಳಿತಾರೂಢ ಪಕ್ಷಗಳ ಶಾಸಕರ ರಾಜೀನಾಮೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಪಕ್ಷದ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನದತ್ತ ಗಮನಹರಿಸಿ ಎಂಬ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಕ್ಷದ ರಾಜ್ಯ ನಾಯಕರಿಗೆ ರವಾನಿಸಿದ್ದಾರೆ.

ಯಾವುದೇ ಕಾರಣಕ್ಕೂ ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರ ರಾಜೀನಾಮೆ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸಿ ಮಧ್ಯೆ ಪ್ರವೇಶಿಸಬೇಡಿ. ಅವರ ಆಂತರಿಕ ಸಮಸ್ಯೆಗಳಿಂದ ರಾಜೀನಾಮೆ ನೀಡಿ ಹೊರಬರುವುದಾದರೆ ಬರಲಿ. ಸಮ್ಮಿಶ್ರ ಸರ್ಕಾರ ಪತನಗೊಳ್ಳುವಂಥ ಸನ್ನಿವೇಶ ನಿರ್ಮಾಣವಾದಾಗ ಮಧ್ಯೆ ಪ್ರವೇಶಿಸಿದರಾಯಿತು. ಆದರೆ, ಪ್ರಸಕ್ತ ನಡೆಯುತ್ತಿರುವ ಸಂಸತ್‌ ಅಧಿವೇಶನ ಮುಗಿಯುವವರೆಗೆ ಕೇಂದ್ರ ಸರ್ಕಾರ ಮತ್ತು ಪಕ್ಷದ ಘನತೆಗೆ ಕುಂದುಂಟಾಗುವಂಥ ಯಾವುದೇ ಬೆಳವಣಿಗೆಗಳಿಗೆ ಆಸ್ಪದ ಕೊಡುವುದು ಬೇಡ ಎಂದು ಅವರು ಪುನರುಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡನೇ ಬಾರಿ ಅಸ್ತಿತ್ವಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಮೊದಲ ಸಂಸತ್‌ ಅಧಿವೇಶನ ಇದಾಗಿರುವುದರಿಂದ ಪ್ರತಿಪಕ್ಷಗಳಿಗೆ ಹೊಸ ಅಸ್ತ್ರ ನೀಡುವ ಬೆಳವಣಿಗೆ ಬೇಡ. ಕರ್ನಾಟಕದಲ್ಲಿನ ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಶಾಸಕರು ತಮ್ಮ ಆಂತರಿಕ ಸಮಸ್ಯೆಗಳಿಂದಾಗಿ ಅವರಾಗಿಯೇ ರಾಜೀನಾಮೆ ನೀಡಿದರೆ ನೀಡಲಿ. ಆದರೆ, ಅದರಲ್ಲಿ ಬಿಜೆಪಿ ಪಾತ್ರವಿದೆ ಎಂಬ ಆರೋಪ ಬರದಂತೆ ಎಚ್ಚರಿಕೆ ವಹಿಸಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಅಮಿತ್‌ ಶಾ ಅವರು ಇದೇ ಮಾತನ್ನು ರಾಜ್ಯ ನಾಯಕರಿಗೆ ಹೇಳಿದ್ದರು. ಹೀಗಾಗಿಯೇ ರಾಜ್ಯ ಬಿಜೆಪಿ ನಾಯಕರು ಈ ಹಿಂದೆ ಎರಡು ಬಾರಿ ನಡೆಸಿದಂತೆ ಆಡಳಿತಾರೂಢ ಪಕ್ಷಗಳ ಶಾಸಕರನ್ನು ಸಂಪರ್ಕಿಸಿ ಆಮಿಷಗಳನ್ನು ಒಡ್ಡುವಂಥ ಪ್ರಯತ್ನಗಳನ್ನು ಕಡಿಮೆಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಪಕ್ಷದ ಹಿರಿಯ ರಾಜ್ಯ ನಾಯಕರು ಭೇಟಿ ಮಾಡಿದ ವೇಳೆಯೂ ಈಗ ಸಮಯ ಇರುವುದರಿಂದ ಪಕ್ಷ ಸಂಘಟನೆಯತ್ತ ಗಂಭೀರವಾಗಿ ಗಮನಹರಿಸಿ. ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಗುಂಗಿನಲ್ಲಿ ಸಂಘಟನೆ ಮರೆಯಬೇಡಿ. ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಬೇಕು ಎಂಬ ಮಾತನ್ನು ಹೇಳಿದ್ದರು.

ಸರ್ಕಾರ ರಚಿಸುವ ಅವಸರ ವರಿಷ್ಠರಿಗಿಲ್ಲ:

ಕರ್ನಾಟಕದಲ್ಲಿನ ಸಮ್ಮಿಶ್ರ ಸರ್ಕಾರವನ್ನು ತರಾತುರಿಯಲ್ಲಿ ಕೆಡವಿ ತಮ್ಮ ಪಕ್ಷದ ಪರ್ಯಾಯ ಸರ್ಕಾರ ರಚನೆ ಮಾಡಬೇಕು ಎಂಬ ತರಾತುರಿ ಅಥವಾ ಅವಸರ ಬಿಜೆಪಿ ವರಿಷ್ಠರಿಗೆ ಇಲ್ಲ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಸಂಬಂಧ ಕರ್ನಾಟಕದಲ್ಲಿ ಪಕ್ಷದ ಸರ್ಕಾರ ಇದ್ದರೆ ಅನುಕೂಲವಾಗುತ್ತದೆ ಎಂಬ ಮಾತನ್ನು ಕೆಲವು ರಾಜ್ಯ ನಾಯಕರು ಹೇಳಿದ್ದರಿಂದ ಆಗ ಹಸಿರು ನಿಶಾನೆ ತೋರಿದ್ದರು.

ಆದರೆ, ಆ ಹಸಿರು ನಿಶಾನೆ ತೋರಿದ್ದರ ಪರಿಣಾಮ ನಡೆದ ಬೆಳವಣಿಗೆಗಳಿಂದ ವರಿಷ್ಠರು ಬೇಸರಗೊಂಡಿದ್ದರು. ರಾಜ್ಯ ಬಿಜೆಪಿ ನಾಯಕರು ಆಡಳಿತಾರೂಢ ಪಕ್ಷಗಳ ಶಾಸಕರನ್ನು ಸೆಳೆಯಲು ನೇರವಾಗಿ ಆಮಿಷ ಒಡ್ಡಿ ಪ್ರಯತ್ನ ಮಾಡಿರುವಂಥ ಆಡಿಯೋ ಸಿಡಿಗಳು ಬಹಿರಂಗಗೊಂಡಿದ್ದರಿಂದ ಪಕ್ಷದ ವರಿಷ್ಠರು ಸಿಡಿಮಿಡಿಗೊಂಡಿದ್ದರು.

ಈಗ ಲೋಕಸಭಾ ಚುನಾವಣೆ ಮುಗಿದಿದೆ. ತಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರದಿದ್ದರೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಭರ್ಜರಿ ಜಯಭೇರಿ ಗಳಿಸಿದೆ. ಹೀಗಾಗಿ, ಇದೀಗ ಅಳೆದೂ ತೂಗಿ ಹೆಜ್ಜೆ ಇಡಲು ಬಿಜೆಪಿ ವರಿಷ್ಠರು ಬಯಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಮ್ಮಿಶ್ರ ಸರ್ಕಾರ ಮಿತ್ರ ಪಕ್ಷಗಳ ನಡುವೆ ಹೊಂದಾಣಿಕೆ ಸಮಸ್ಯೆ ಇರುವುದರಿಂದ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬುದು ಜಗಜ್ಜಾಹೀರಾಗಿದೆ. ಹೀಗಾಗಿ, ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹಿರಂಗವಾಗಿ ಹೊರಬರಲಿ. ನಂತರ ಮುಂದೇನು ಮಾಡಬೇಕು ಎಂಬುದನ್ನು ಪರಾಮರ್ಶೆ ನಡೆಸಿ ನಿರ್ಧರಿಸೋಣ ಎಂಬ ಮಾತನ್ನು ವರಿಷ್ಠರು ರವಾನಿಸಿದ್ದಾರೆ.

Follow Us:
Download App:
  • android
  • ios