ಚುನಾವಣೆ ಸ್ಪರ್ಧಾಳುಗಳಿಗೆ ಕೇಂದ್ರದಿಂದ ಹೊಸ ಆಫರ್
ಕೇಂದ್ರ ಸರ್ಕಾರ ಇದೀಗ ಚುನಾವಣೆ ಸ್ಪರ್ಧಿಸುವವರಿಗೆ ಬಿಗ್ ಆಫರ್ ಒಂದನ್ನು ನೀಡುತ್ತಿದೆ. ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ವಿಮೆ ನೀಡಲು ನಿರ್ಧರಿಸುತ್ತಿದೆ.
ಶ್ರೀನಗರ: ಜನಸಾಮಾನ್ಯರು ಅಪಘಾತ, ಆರೋಗ್ಯ, ಜೀವವಿಮೆ ಮಾಡಿಸುವುದು ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೂ ವಿಮೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸುಲಲಿತವಾಗಿ ಮುಂದುವರೆದುಕೊಂಡು ಹೋಗುವಲ್ಲಿ ನಾನಾ ರೀತಿಯಲ್ಲಿ ಅಡ್ಡಿ ಮಾಡುತ್ತಿರುವ ಉಗ್ರರು, ಕಳೆದ 4 ವರ್ಷಗಳಲ್ಲಿ 16 ಗ್ರಾಮಪಂಚಾಯತ್ ಸದಸ್ಯರು ಮತ್ತು ಗ್ರಾಮಪಂಚಾಯತ್ ಮುಖ್ಯಸ್ಥರನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ಚುನಾವಣೆಗೆ ನಿಲ್ಲದಂತೆ ಬೆದರಿಕೆ ಒಡ್ಡುವ ತಂತ್ರ ಅನುಸರಿಸಿದ್ದಾರೆ. ಈ ನಡುವೆ ಮುಂದಿನ ಜನರಲ್ಲಿ ರಾಜ್ಯ ಮತ್ತೊಮ್ಮೆ ಪಂಚಾಯತ್ ಚುನಾವಣೆಗೆ ಸಜ್ಜಾಗುತ್ತಿದೆ.
ಆದರೆ ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಬಹಳಷ್ಟುಜನ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಭ್ಯರ್ಥಿಗಳಿಗೆ ಭಯ ನಿವಾರಿಸುವ ನಿಟ್ಟಿನಲ್ಲಿ ಮತ್ತು ಒಂದು ವೇಳೆ ಚುನಾವಣೆ ಅವರಿಗೇನಾದರೂ ಆದಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಅಭ್ಯರ್ಥಿಗಳಿಗೆ ವಿಮಾ ಯೋಜನೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
2011ರಲ್ಲಿ ರಾಜ್ಯದಲ್ಲಿ ಪಂಚಾಯತ್ ಚುನಾವಣೆಗಳು ನಡೆದಾಗ ಅಭೂತಪೂರ್ವ ಎನ್ನುವಂತೆ ಶೇ.75ರಷ್ಟುಮತಚಲಾವಣೆಯಾಗಿತ್ತು. ಉಗ್ರರ ಬೆದರಿಕೆ ಬದಿಗೊತ್ತಿ ಜನ ಮತಗಟ್ಟೆಗೆ ಧಾವಿಸಿದ್ದರು. ಆಗ 29000 ಪಂಚಾಯತ್ ಸದಸ್ಯರು ಮತ್ತು 4500 ಗ್ರಾ.ಪಂ ಮುಖ್ಯಸ್ಥರು ಆಯ್ಕೆಯಾಗಿದ್ದರು.