ನವದೆಹಲಿ(ನ.1): ರಾಮ ಮಂದಿರ ಕುರಿತು ತುರ್ತು ವಿಚಾರಣೆ ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಆಡಳಿತಾರೂಢ ಬಿಜೆಪಿಗೆ ವರವೋ ಶಾಪವೋ ಎಂಬ ಚರ್ಚೆ ಇದೀಗ ದೇಶಾದ್ಯಂತ ನಡೆಯುತ್ತಿದೆ.

ರಾಮ ಮಂದಿರ ಕುರಿತು ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಈ ಕುರಿತು ಜನೆವರಿಯಲ್ಲಿ ವಿಶೇಷ ಪೀಠ ರಚಿಸಿ ಆ ಮೂಲಕ ಪ್ರಕರಣದ ವಿಚಾರಣೆ ಯಾವಾಗ ನಡೆಸಬೇಕು ನಡೆಸಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಒಡೆದ ಸಹನೆಯ ಕಟ್ಟೆ:

ಸುಪ್ರೀಂ ತೀರ್ಪು ದಶಕಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿರುವ ಹಿಂದೂ ಸಂಘಟನೆಗಳ ಸಹನೆಯ ಕಟ್ಟೆಯೊಡೆಯುವಂತೆ ಮಾಡಿದೆ. ಇದೇ ಕಾರಣಕ್ಕೆ 2019ರೊಳಗಾಗಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂಬ ಕೂಗು ಇದೀಗ ದೇಶಾದ್ಯಂತ ಕೇಳಿ ಬರುತ್ತಿದೆ.  

ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಹಿಂದೂ ಸಂಘಟನೆಗಳ ಕೂಗು ಜೋರಾಗಿದ್ದು, ಇದು ಆಡಳಿತಾರೂಢ ಬಿಜೆಪಿ ಮೇಲೆ ಒತ್ತಡ ಹೆಚ್ಚಲು ಕಾರಣವಾಗಿದೆ. ಮಂದಿರ ನಿರ್ಮಾಣ ನ್ಯಾಯಾಲಯದ ಮೂಲಕ ಬಗೆಹರಿಯುವಂತದ್ದಲ್ಲ, ಬದಲಾಗಿ ಕೇಂದ್ರ ಸರ್ಕಾರವೇ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಂದಿರ ನಿರ್ಮಾಣಕ್ಕೆ  ಮುಂದಾಗಬೇಕು ಎಂಬುದು ಹಿಂದೂ ಸಂಘಟನೆಗಳ ಆಗ್ರಹವಾಗಿದೆ.

ಇನ್ನು ಬಿಜೆಪಿ ಆಂತರಿಕ ವಲಯದಲ್ಲೇ ಈ ಕುರಿತು ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರೇ ಸುಗ್ರೀವಾಜ್ಞೆ ಹೊರಡಿಸಲು ಇದು ಸರಿಯಾದ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಬಿಜೆಪಿ ಮಿತ್ರಪಕ್ಷ ಶಿವಸೇನೆ ಕೂಡ ಸುಗ್ರಿವಾಜ್ಞೆಗಾಗಿ ಆಗ್ರಹಿಸುತ್ತಿದೆ.

ಇನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸೇರಿದಂತೆ ಪ್ರಮುಖ ಹಿಂದೂ ಸಂಘಟನೆಗಳು ಕೂಡ ಸುಗ್ರೀವಾಜ್ಞೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಬಾಬರಿ ಮಸೀದಿ ಪರ ರಾಜಕೀಯ ಪಕ್ಷಗಳು ಪ್ರಮುಖವಾಗಿ ಹೈದರಾಬಾದ್ ಮೂಲದ ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ತಾಕತ್ತಿದ್ದರೆ ಕೇಂದ್ರ ಸರ್ಕಾರ ಮಂದಿರ ನಿರ್ಮಾಣದ ಪರ ಸುಗ್ರೀವಾಜ್ಞೆ ಹೊರಡಿಸಲಿ ಎಂದು ಸವಾಲು ಹಾಕುತ್ತಿವೆ.

ಅಡಕತ್ತರಿಯಲ್ಲಿ ಕೇಂದ್ರ?:

ಈ ಎಲ್ಲಾ ಬೆಳವಣಿಗೆಗಳಿಂದ ಅಡಕತ್ತರಿಯಲ್ಲಿ ಸಿಲುಕಿರುವ ಕೇಂದ್ರ ಸರ್ಕಾರ , ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕೊ ಅಥವಾ ಸುಗ್ರೀವಾಜ್ಞೆ ಜಾರಿಗೊಳಿಸಿ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೊ ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದೆ. ಕಾರಣ 2019ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಇದ್ದು, ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಗೆ ಮಂದಿರ ನಿರ್ಮಾಣದ ವಾಗ್ದಾನ ಈಡೇರಿಸುವ ಒತ್ತಡ ಇರುವುದು ಖಚಿತ.  

ಆದರೆ ಕೇಂದ್ರ ಸರ್ಕಾರ ಒತ್ತಡದಲ್ಲಿದೆ ಎಂಬುದು ಮೇಲ್ನೋಟಕ್ಕೆ ಮಾತ್ರ ಕಂಡುಬರುವ ಸತ್ಯವಾಗಿದೆ. ಆಂತರಿಕವಾಗಿ ಇದು ಬಿಜೆಪಿಗೆ ಲಾಭ ತಂದುಕೊಡುವ ವಿಚಾರವೇ ಆಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. 

ಕೇಂದ್ರಕ್ಕೆ ಒತ್ತಡವೇ ವರದಾನ?:

ಕಾರಣ ಸುಪ್ರೀಂ ಕೋರ್ಟ್ ತೀರ್ಪಿನಿಂದ ದೇಶದ ಅತ್ಯಂತ ಪ್ರಮುಖ ಪ್ರಕರಣದ ವಿಚಾರಣೆ ವಿಳಂಬವಾಗುವುದಂತೂ ಖಚಿತ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತಂದು ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿಂದೂ ಮತಗಳು ಅನಾಯಾಸವಾಗಿ ದೊರೆಯಲಿವೆ. ಅಲ್ಲದೇ ಸುಗ್ರೀವಾಜ್ಞೆ ಎಂಬ ಅಸ್ತ್ರದ ಮೂಲಕ ತಾನು ರಾಮ ಮಂದಿರ ನಿರ್ಮಾಣದ ಪರವಾಗಿದ್ದೇನೆ ಎಂದು ಸಾರಲು ಬಿಜೆಪಿಗೆ ಅನುಕೂಲವೂ ಆಗಲಿದೆ.

ಎಲ್ಲಿದೆ ನ್ಯಾಯಾಂಗದಲ್ಲಿ ಹಸ್ತಕ್ಷೇಪ?:

ಇದು ಒಂದು ಕಡೆಯಾದರೆ ಬಿಜೆಪಿಗೆ ಲಾಭ ತಂದುಕೊಡಬಲ್ಲ ಮತ್ತೊಂದು ಸಂಗತಿ ಎಂದರೆ, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ ಕೇಳಿ ಬರುತ್ತಿರುವ ನ್ಯಾಯಾಂಗದಲ್ಲಿ ಸಕಾರ್ಕಾರದ ಹಸ್ತಕ್ಷೇಪ ಎಂಬ ಪ್ರಮುಖ ಆರೋಪದಿಂದಲೂ ಮುಕ್ತಿ ದೊರೆಯುವ ಸಾಧ್ಯತೆ ಇದೆ. ಒಂದು ವೇಳೆ ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆ, ರಾಮ ಮಂದಿರ ನಿರ್ಮಾಣದ ವಿಷಯದಲ್ಲೂ ಹಸ್ತಕ್ಷೇಪ ಮಾಡಿ ಶೀಘ್ರ ವಿಚಾರಣೆ ನಡೆಯುವಂತೆ ಮಾಡಬಹುದಿತ್ತು. ಆದರೆ ಹಾಗಾಗದಿರಲು ನ್ಯಾಯಾಂಗದ ಸ್ವಾತಂತ್ರ್ಯ ಯಥಾಸ್ಥಿತಿಯಲ್ಲಿರುವುದೇ ಕಾರಣ ಎಂದೂ ಬಿಜೆಪಿ ನಿರ್ಭಯವಾಗಿ ಹೇಳಬಹುದು. 

ಅಂದರೆ ಎರಡೂ ರೀತಿಯಿಂದ ಇದು ಬಿಜೆಪಿಗೆ ಲಾಭ ತಂದುಕೊಡಬಲ್ಲ ಸಂಗತಿಯೇ ಆಗಿದೆ. ಒಂದು ಕಡೆ ನ್ಯಾಯಾಲಯದ ತೀರ್ಪು ವಿಳಂಬ ಮತ್ತು ಹಿಂದೂ ಸಂಘಟನೆಗಳ ಒತ್ತಡದ ಕಾರಣ ನೀಡಿ ಸುಗ್ರೀವಾಜ್ಞೆ  ಹೊರಡಿಸುವುದು, ಮತ್ತೊಂದು ಕಡೆ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಎಂಬ ಆರೋಪದಿಂದಲೂ ಮುಕ್ತಿ ಪಡೆದಿದ್ದು ಬಿಜೆಪಿ ಪಾಲಿಗಂತೂ ವರದಾನವೇ ಸರಿ.