ನವದೆಹಲಿ: 2019-2020ನೇ ಸಾಲಿನ ಮಧ್ಯಂತರ ಬಜೆಟ್ಟನ್ನು ವಿತ್ತ ಸಚಿವ ಪಿಯೂಷ್‌ ಗೋಯಲ್‌ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಚುನಾವಣಾ ವರ್ಷವಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರು, ತೆರಿಗೆದಾರರು, ಸಾಮಾನ್ಯ ವರ್ಗದವರನ್ನು ಬಜೆಟ್‌ನಲ್ಲಿ ಓಲೈಸುವ ಸಾಧ್ಯತೆ ಇದೆ.

ರೈತರಿಗೆ ಭರ್ಜರಿ ಪ್ಯಾಕೇಜ್‌ಗಳು, ಬಡ್ಡಿ ಮನ್ನಾ, ಆದಾಯ ತೆರಿಗೆ ಮಿತಿ ಏರಿಕೆ, ಮೂಲಸೌಕರ್ಯ ಕ್ಷೇತ್ರಕ್ಕೆ ಅಧಿಕ ಕೊಡುಗೆ- ಮುಂತಾದವನ್ನು ಸರ್ಕಾರ ಪ್ರಕಟಿಸಬಹುದು. ಜತೆಗೆ ಪ್ರಗತಿ ದರ ಶೇ.7.5ರಷ್ಟಾಗಲು ಕ್ರಮಗಳನ್ನು ಸರ್ಕಾರ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ರೈಲ್ವೆ ಆಯವ್ಯಯವೂ ವಿಲೀನಗೊಂಡಿರುವ ಈ ಬಜೆಟ್‌ ಅನ್ನು ಅರುಣ್‌ ಜೇಟ್ಲಿ ಅವರು ಮಂಡನೆ ಮಾಡಬೇಕಿತ್ತು. ಆದರೆ ಅವರು ಅನಾರೋಗ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಪಿಯೂಷ್‌ ಗೋಯಲ್‌ ಅವರು ಸಂಸತ್ತಿನಲ್ಲಿ ಬೆಳಗ್ಗೆ 11ಕ್ಕೆ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಇನ್ನು ರೈಲ್ವೆ ವಲಯಕ್ಕೆ ಸಂಬಂಧಿಸಿದಂತೆ ಸಚಿವ ಪಿಯೂಷ್‌ ಗೋಯಲ್‌, ಹೊಸ ರೈಲುಗಳನ್ನು ಪ್ರಕಟಿಸುವ ಸಾಧ್ಯತೆ ಕಡಿಮೆ. ಅದರ ಬದಲಿಗೆ ಹಾಲಿ ಇರುವ ರೈಲುಗಳ ವೇಗವನ್ನು ಹೆಚ್ಚಿಸುವುದು, ಕೆಲವು ಸೆಮಿ ಹೈಸ್ಪೀಡ್‌ ರೈಲುಗಳನ್ನು ಪ್ರಕಟಿಸುವ ನಿರೀಕ್ಷೆ ದಟ್ಟವಾಗಿದೆ. ಸುರಕ್ಷಿತ, ವೇಗ, ಉತ್ತಮ (ಸೇಫ್‌, ಸ್ಪೀಡ್‌ ಹಾಗೂ ಬೆಟರ್‌) ಎಂಬ ಮೂರು ವಿಚಾರಗಳ ಬಗ್ಗೆ ಬಜೆಟ್‌ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಿರೀಕ್ಷೆಗಳು

ಕೃಷಿ

- ರೈತರಿಗೆ 1 ಲಕ್ಷ ಕೋಟಿ ರುಪಾಯಿ ಮೌಲ್ಯದ ಪ್ಯಾಕೇಜ್‌

- ಆಹಾರ ಸಹಾಯಧನಕ್ಕೆ ಈ ವರ್ಷಕ್ಕೆ 1.8 ಲಕ್ಷ ಕೋಟಿ ರು.

- ಆಹಾರ ಬೆಳೆಗಳ ವಿಮೆಗೆ ಸರ್ಕಾರದಿಂದಲೇ ಪ್ರೀಮಿಯಂ ಪಾವತಿ

- ನಿಗದಿತ ಸಮಯಕ್ಕೆ ಅಸಲು ಕಟ್ಟುವ ರೈತರ ಪೂರ್ಣ ಬಡ್ಡಿ ಮನ್ನಾ

- ತೆಲಂಗಾಣ ಮಾದರಿ ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ಜಮೆ

ತೆರಿಗೆ

- ಆದಾಯ ತೆರಿಗೆ ವಿನಾಯ್ತಿ ಮಿತಿ 2.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ

- ಹಿರಿಯರಂತೆ ಮಹಿಳೆಯರಿಗೂ ತೆರಿಗೆ ವಿನಾಯ್ತಿ ಮಿತಿ 3.25 ಲಕ್ಷಕ್ಕೆ

- ಸೆಕ್ಷನ್‌ 80ಸಿ ಅಡಿ ವಿನಾಯ್ತಿ ಮಿತಿ 1.50 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ

- ಗೃಹ ಸಾಲದ ಬಡ್ಡಿ ಪಾವತಿ ವಿನಾಯ್ತಿ 2 ಲಕ್ಷದಿಂದ 2.5 ಲಕ್ಷಕ್ಕೇರಿಕೆ

- ಸಣ್ಣ ಉದ್ದಿಮೆ, ಮಧ್ಯಮ ವರ್ಗದ ತೆರಿಗೆದಾರರಿಗೆ ಹೆಚ್ಚಿನ ವಿನಾಯ್ತಿ

ಬಡವರಿಗೆ ಆದಾಯ

- ದೇಶದಲ್ಲಿ ಸುಮಾರು 12 ಕೋಟಿಯಷ್ಟಿರುವ ಕಡುಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ

ಬ್ಯಾಂಕ್‌

- 5 ಕೋಟಿಗಿಂತ ಕಡಿಮೆ ವಹಿವಾಟು ನಡೆಸುವ ಉದ್ದಿಮೆಗಳ ಮೇಲಿನ ಸಾಲದ ಬಡ್ಡಿ ದರ ಶೇ.2ರಷ್ಟುಕಡಿತ

- ಕಡಿತಗೊಂಡ ಬಡ್ಡಿ ಪ್ರಮಾಣ ಸರ್ಕಾರದಿಂದಲೇ ಬ್ಯಾಂಕ್‌ ಖಾತೆಗಳಿಗೆ ಭರಿಸುವಿಕೆ

- ಸರ್ಕಾರಿ ವಲಯದ ವಿಮಾ ಕಂಪನಿಗಳಿಗೆ 4 ಸಾವಿರ ಕೋಟಿ ಬಂಡವಾಳ ಹರಿವು


ಬಂಡವಾಳ ಹಿಂತೆಗೆತ

2019-20ರಲ್ಲಿ 11 ಶತಕೋಟಿ ಡಾಲರ್‌ ಮೌಲ್ಯದ ಸರ್ಕಾರಿ ಆಸ್ತಿಗಳ ಮಾರಾಟ

ಐಆರ್‌ಸಿಟಿಸಿ, ರೇಲ್‌ಟೆಲ್‌, ಟೆಲಿಕಾಂ ಕನ್ಸಲ್ಟಂಟ್ಸ್‌, ಸೀಡ್ಸ್‌ ಕಾರ್ಪೋರೇಷನ್‌ಗಳನ್ನು ಷೇರುಪೇಟೆಯಲ್ಲಿ ಲಿಸ್ಟ್‌ ಮಾಡಿಸಿ ಐಪಿಒ ಮಾರಾಟ

ಲೋಹ

- ಚಿನ್ನದ ಮೇಲಿನ ಸುಂಕ ಕಡಿತ ಸಂಭವ


ಆರೋಗ್ಯ

- ಆರೋಗ್ಯ ಕ್ಷೇತ್ರದ ಬಜೆಟ್‌ ಕಳೆದ ವರ್ಷಕ್ಕಿಂತ ಶೇ.5ರಷ್ಟುಹೆಚ್ಚು ಸಾಧ್ಯತೆ

---

ಆಟೋಮೊಬೈಲ್‌

- ಎಲೆಕ್ಟ್ರಿಕ್‌ ಹಾಗೂ ಬ್ಯಾಟರಿ ಚಾಲಿತ ಕಾರುಗಳ ಮೇಲಿನ ಜಿಎಸ್‌ಟಿ ಕಡಿತ ನಿರೀಕ್ಷೆ

ಐಟಿ/ಟೆಲಿಕಾಂ

- ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಡಿಜಿಟಲ್‌ ಮೂಲಸೌಕರ್ಯ

- ಸ್ಟಾರ್ಟಪ್‌ಗಳ ಮೇಲಿನ ತೆರಿಗೆ ಇಳಿಕೆ ಸಾಧ್ಯತೆ

- ಸ್ಪೆಕ್ಟ್ರಂ ಶುಲ್ಕ ಇಳಿಕೆ, ಶೇ.20ರಷ್ಟಿರುವ ಟೆಲಿಕಾಂ ಸಲಕರಣೆಗಳ ಮೇಲಿನ ಆಮದು ಶುಲ್ಕ ಕಡಿತ