ನವದೆಹಲಿ :  ಭಾರತೀಯ ಜನರ ಜೀವನಾಡಿ ಎನ್ನಿಸಿಕೊಂಡಿರುವ ರೈಲ್ವೆಗೆ ಈ ಬಾರಿಯ ಮುಂಗಡಪತ್ರದಲ್ಲಿ ಹಿಂದೆಂದಿಗಿಂತ ಹೆಚ್ಚು ಅನುದಾನ ನೀಡಲಾಗಿದೆ. 

2019 - 20 ನೇ ಸಾಲಿನ ಮುಂಗಡ ಪತ್ರದಲ್ಲಿ ರೈಲ್ವೆ ಇಲಾಖೆಗೆ 1.58 ಲಕ್ಷ ಕೋಟಿ ರುಪಾಯಿ ಅನುದಾನ ಒದಗಿಸಲಾಗಿದೆ. ರೈಲ್ವೆ ಸಚಿವರೂ ಆದ ವಿತ್ತ ಖಾತೆ ಹೊಣೆ ಹೊತ್ತಿರುವ ಪೀಯೂಶ್ ಗೋಯಲ್ ಅವರು, ‘ರೈಲ್ವೆಗೆ 1.58 ಲಕ್ಷ ಕೋಟಿ ರು. ಅನುದಾನವನ್ನು ಮುಂದಿನ ಹಣಕಾಸು ವರ್ಷಕ್ಕೆ ನೀಡಲಾಗಿದೆ’ ಎಂದು ಸಂಸದರ ಹರ್ಷೋದ್ಗಾರದ ನಡುವೆ ಪ್ರಕಟಿಸಿದರು. 

ಕಳೆದ ವರ್ಷ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಿದಾಗ ರೈಲ್ವೆಗೆ 1.48 ಲಕ್ಷ ಕೋಟಿ ರುಪಾಯಿ ಅನುದಾನ ನೀಡಿದ್ದರು. ಇನ್ನು 2014ರ ಅನುದಾನಕ್ಕೆ ಹೋಲಿಸಿದರೆ ಈ ಸಲ ನೀಡಿದ ಅನುದಾನ ಶೇ. 148 ರಷ್ಟು ಅಧಿಕ. ಇನ್ನು 2019 - 20 ರಲ್ಲಿ ರೈಲ್ವೆಗೆ 2,72 ,705.68 ಕೋಟಿ ರು. ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ. 

ಇದು 2018- 19ರ 2, 49, 851.01 ಕೋಟಿ ರು.ಗಿಂತ 22,854.67 ಕೋಟಿ ರುಪಾಯಿ ಅಧಿಕ. ರೈಲ್ವೆ ಬಜೆಟ್ ಯಾವುದಕ್ಕೆ ಎಷ್ಟು ಅನುದಾನ? ಮುಂಗಡಪತ್ರದಲ್ಲಿ 7,255 ಕೋಟಿ ರು.ಗಳನ್ನು ಹೊಸ ಮಾರ್ಗ ನಿರ್ಮಿಸಲು ನೀಡಲಾಗಿದೆ. 

ಗೇಜ್ ಪರಿವರ್ತನೆಗೆ 2,200 ಕೋಟಿ ರು., ರೈಲ್ವೆ ಜೋಡಿ ಮಾರ್ಗ ನಿರ್ಮಾಣಕ್ಕೆ 700 ಕೋಟಿ ರು., ಸಿಗ್ನಲಿಂಗ್ ಹಾಗೂ ದೂರಸಂಪರ್ಕಕ್ಕೆ 1,750 ಕೋಟಿ ರು., ಪ್ರಯಾಣಿಕ ಮೂಲಸೌಕರ್ಯಕ್ಕೆ 3,422 ಕೋಟಿ ರು. ಹಾಗೂ ರೈಲ್ವೆ ಎಂಜಿನ್/ಬೋಗಿ ನಿರ್ಮಾಣಕ್ಕೆ 6,114.82 ಕೋಟಿ ರುಪಾಯಿ ನೀಡಲಾಗಿದೆ. 

ಪ್ರಯಾಣಿಕ ಮೂಲಸೌಕರ್ಯಕ್ಕೆ ಕಳೆದ ಸಲಕ್ಕಿಂತ 1 ಸಾವಿರ ಕೋಟಿ ರು. ಹೆಚ್ಚು ನೀಡಿದ್ದು ವಿಶೇಷ. ದರ ಏರಿಕೆ ಇಲ್ಲ ಈ ಬಾರಿ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿಲ್ಲ. ಚುನಾವಣಾ ವರ್ಷವಾದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆಯೇ ಯಾವುದೇ ದರ ಏರಿಕೆ ಮಾಡದೇ ಇರುವುದು ಸ್ವಾಭಾವಿಕ.

ಹಾಗೆಯೇ ಪ್ರತಿ ವರ್ಷ ಸರಕು ಸಾಗಣೆ ದರವನ್ನು ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಈ ಸಲ ಸರಕು ಸಾಗಣೆ ದರವನ್ನು ಕೂಡ ಹೆಚ್ಚಿಸಿಲ್ಲ. 

180ಕಿ.ಮೀ. ವೇಗದ ‘ವಂದೇಭಾರತ’ : ಗಂಟೆಗೆ 180 ಕಿ.ಮೀ. ವೇಗದಲ್ಲಿ ವಾರಾಣಸಿ ಹಾಗೂ ದೆಹಲಿ ಮಧ್ಯೆ ಸಂಚರಿಸುವ ವಂದೇಭಾರತ ಸೆಮಿ ಹೈಸ್ಪೀಡ್ ರೈಲನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. 

ಈ ಸೆಮಿ ಹೈಸ್ಪೀಡ್ ರೈಲು ಪ್ರಯಾಣಿಕರಿಗೆ ವಿಶ್ವದರ್ಜೆ ಅನುಭವ ನೀಡಲಿದೆ ಎಂದು ಬಜೆಟ್ ವೇಳೆ ಸಚಿವ ಪೀಯೂಶ್ ಗೋಯಲ್ ಹೇಳಿದರು. ಈ ರೈಲಿನ ಬೋಗಿಗಳನ್ನು ಸಂಪೂರ್ಣವಾಗಿ ನಮ್ಮದೇ ಎಂಜಿನಿಯರ್‌ಗಳು ಸಿದ್ಧಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ಇದು ನೆರವಾಗಿದೆ ಎಂದೂ ಸಚಿವರು ಹರ್ಷಿಸಿದರು. 

ಮಾನವರಹಿತ ರೈಲ್ವೆ ಕ್ರಾಸಿಂಗ್ ನಿರ್ಮೂಲನೆ: ರೈಲು ಮಾರ್ಗಗಳಲ್ಲಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದ್ದ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ದೇಶದ ಬ್ರಾಡ್‌ಗೇಜ್ ರೈಲ್ವೆ ಜಾಲದಲ್ಲಿ ಶೂನ್ಯ ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿವೆ ಎಂದು ಪಿಯೂಷ್ ಗೋಯಲ್ ಪ್ರಕಟಿಸಿದರು. ಈ ಹಿಂದಿನ ಎಲ್ಲ ವರ್ಷಗಳಿಗೆ ಹೋಲಿಸಿದರೆ ರೈಲು ದುರಂತಗಳ ಪ್ರಮಾಣ ಕುಸಿದಿದೆ.