ಮುಂಬೈ[ಅ.03]: ತಿಹಾರ್ ಜೈಲಿನಲ್ಲಿರುವ ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್ ತಮ್ಮ ದೀಪಕ್ ನಿಕಲ್ಜೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಬಿಜೆಪಿ ಮೈತ್ರಿ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ದೀಪಕ್ ಪಶ್ಚಿಮ ಮಹಾರಾಷ್ಟ್ರದ ಪಲ್ಟಾನ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಅಕ್ಟೋಬರ್ 21 ರಂದು ನಡೆಯಲಿರುವ ಮಹಾರಾಷ್ಟ್ರ ಉಪಚುನಾವಣೆಗೆ ಬಿಜೆಪಿ, ಶಿವಸೇನೆ ಹಾಗೂ ಇನ್ನಿತರ ಕೆಲ ಸಣ್ಣಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈಗಾಗಲೇ ಪಕ್ಷಗಳ ನಡುವೆ ಸೀಟು ಹಂಚಿಕೆ ನಡೆದಿದ್ದು, ಕೇಂದ್ರ ಸಚಿವ ರಾಮದಾಸ್ ಅಠಾವಳೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಒಟ್ಟು 6 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. 

ಅಕ್ಟೋಬರ್ 3ರಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಮ್ಮ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, 'ಕಳೆದ ಹಲವಾರು ವರ್ಷಗಳಿಂದ ನಿಕಲ್ಜೆ ನಮ್ಮ ಪಕ್ಷದ ಪರ ಕೆಲಸ ಮಾಡಿದ್ದಾರೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಮುಂಬೈನ ಚೇಂಬೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕೆಲವೇ ಅಂತರಗಳಿಂದ ಗೆಲುವಿನಿಂದ ದೂರ ಉಳಿದಿದ್ದರು' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ಈ ಬಾರಿ ದೀಪಕ್ ಪಲ್ಟಾನ್ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಅದೇ ಕ್ಷೇತ್ರದಲ್ಲಿ ಹುಟ್ಟಿ ಬೆಳೆದಿರುವ ಅವರು ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಗೆಲ್ಲುವ ನಿರೀಕ್ಷೆಯೂ ಇದೆ' ಎಂದಿದ್ದಾರೆ.