ಮಂಗಳೂರಿನ ಪುರಭವನದಲ್ಲಿ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಬೃಹತ್‌ ಸಮಾವೇಶ | ಕೇಮಾರು ಶ್ರೀ ಹಾಗೂ ಡಾ. ಜಾನ್‌ ಫರ್ನಾಂಡಿಸ್‌ ಅವರಿಗೆ ಸದ್ಭಾವನಾ ಸಮ್ಮಾನ್‌ ಪ್ರಶಸ್ತಿ ಪ್ರದಾನ

ಮಂಗಳೂರು (ಅ.08): ಸಮಾಜದಲ್ಲಿರುವ ಆಚರಣೆಗಳನ್ನು ಧರ್ಮದ ಜತೆ ತುಲನೆ ಮಾಡುವುದು ಸರಿಯಲ್ಲ. ಧರ್ಮದ ತಿರುಳು ಭಿನ್ನ ರೀತಿಯಲ್ಲಿದ್ದು, ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ. ಸುರೇಂದ್ರ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

ನಗರದ ಪುರಭವನದಲ್ಲಿ ಶುಕ್ರವಾರ ‘ಶಾಂತಿ ಮತ್ತು ಮಾನವೀಯತೆ' ಅಭಿಯಾನದ ಬೃಹತ್‌ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಧರ್ಮ ಹಾಗೂ ಆಚರಣೆಗಳು ಎರಡೂ ಒಂದೇ ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸ ನಡೆಯುತ್ತಿದೆ. ಇದು ನಿಜವಾಗಿಯೂ ತಪ್ಪು ಎಂದು ಒತ್ತಿ ಹೇಳಿದರು.

ಪ್ರಶಸ್ತಿ ಪ್ರದಾನ: ಇದೇ ಸಂದರ್ಭ ಕೇಮಾರು ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಮಂಗಳೂರು ವಿವಿಯ ಕ್ರೈಸ್ತ ಧರ್ಮ ಅಧ್ಯಯನ ಪೀಠದ ಡಾ. ಜಾನ್‌ ಫರ್ನಾಂಡಿಸ್‌ ಅವರಿಗೆ ಸದ್ಭಾವನಾ ಸಮ್ಮಾನ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಮಾತನಾಡಿದರು. ಶಾಂತಿ ಮತ್ತು ಮಾನವೀಯತೆ ಅಭಿಯಾನದ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ , ಪ್ರಸಾದ್‌ ರೈ ಕಲ್ಲಿಮಾರ್‌, ಸದಾನಂದ ಬಂಗೇರ, ಹರಿಣಿ, ಆಕ್ಬರ್‌ ಆಲಿ, ಕೆ.ಎಂ. ಆಶ್ರಫ್‌, ಡಾ. ವಾಸುದೇವ ಬೆಳ್ಳೆ, ಉಮ್ಮರ್‌ ಯು.ಎಚ್‌. ಇದ್ದರು.

ಪ್ರೌಢಶಾಲೆ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇದರ ಜತೆಯಲ್ಲಿ ಕಿರು ವಿಡಿಯೊ ಚಿತ್ರ ಪ್ರದರ್ಶನ ನಡೆಯಿತು. ಬಳಿಕ ಬಹುಭಾಷಾ ಕವಿಗೋಷ್ಠಿ ನಡೆಯಿತು. (ಕನ್ನಡಪ್ರಭ ವಾರ್ತೆ)