Asianet Suvarna News Asianet Suvarna News

ಜೆಡಿಎಸ್ ಬಳಿ ಇದೆ ಉಮಾಶ್ರೀ ಗೆಲುವಿನ ಕೀಲಿ ಕೈ..!

ನೇಕಾರಿಕೆಗೆ ಪ್ರಸಿದ್ಧಿ ಪಡೆದಿರುವ ರಬಕವಿ- ಬನಹಟ್ಟಿಯನ್ನು ಒಳಗೊಂಡಿರುವ ತೇರದಾಳ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಕ್ಷೇತ್ರ ಮರುವಿಂಗಡಣೆ ವೇಳೆ ಗುಳೇದಗುಡ್ಡ ಕ್ಷೇತ್ರ ಮಾಯವಾಗಿ ತೇರದಾಳ ಉದಯಿಸಿತು. ಜಮಖಂಡಿ, ಮುಧೋಳ ತಾಲೂಕಿನ ಕೆಲವು ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ. ಹೊಸ ಕ್ಷೇತ್ರ ರಚನೆಯಾಗುತ್ತಿದ್ದಂತೆ ಹೊಸ ರಾಜಕಾರಣಿಯಾಗಿ ಕ್ಷೇತ್ರ ಪ್ರವೇಶಿಸಿದವರು ಹೆಸರಾಂತ ಚಿತ್ರನಟಿ ಉಮಾಶ್ರೀ.

Umashree Contest Election From Teradala

ಬಾಗಲಕೋಟೆ : ನೇಕಾರಿಕೆಗೆ ಪ್ರಸಿದ್ಧಿ ಪಡೆದಿರುವ ರಬಕವಿ- ಬನಹಟ್ಟಿಯನ್ನು ಒಳಗೊಂಡಿರುವ ತೇರದಾಳ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಕ್ಷೇತ್ರ ಮರುವಿಂಗಡಣೆ ವೇಳೆ ಗುಳೇದಗುಡ್ಡ ಕ್ಷೇತ್ರ ಮಾಯವಾಗಿ ತೇರದಾಳ ಉದಯಿಸಿತು. ಜಮಖಂಡಿ, ಮುಧೋಳ ತಾಲೂಕಿನ ಕೆಲವು ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ. ಹೊಸ ಕ್ಷೇತ್ರ ರಚನೆಯಾಗುತ್ತಿದ್ದಂತೆ ಹೊಸ ರಾಜಕಾರಣಿಯಾಗಿ ಕ್ಷೇತ್ರ ಪ್ರವೇಶಿಸಿದವರು ಹೆಸರಾಂತ ಚಿತ್ರನಟಿ ಉಮಾಶ್ರೀ.

2008ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅವರಿಗೆ ‘ಹೊರಗಿನವರು’ ಎಂಬ ಹಣೆಪಟ್ಟಿಯಿಂದಾಗಿ ಗೆಲುವು ಸಿಗಲಿಲ್ಲ. ಆದರೆ ಕ್ಷೇತ್ರದಲ್ಲೇ ಮನೆ ಮಾಡಿ ಮತದಾರರ ಜತೆ ಒಡನಾಟ ಸಾಧಿಸಿದ ಉಮಾಶ್ರೀ, 2013 ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದರು. ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಸಚಿವೆಯೂ ಆದರು. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಅವರು ಇಳಿದಿದ್ದಾರೆ.

ಹೊರಗಿನವರು ಒಳಗಿನವರಾದರು: 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿದ್ದು ಸವದಿ ವಿರುದ್ಧ ಸುಮಾರು 12 ಸಾವಿರ ಮತಗಳ ಅಂತರದಿಂದ  ಪರಾಭವಗೊಂಡಿದ್ದರು ಉಮಾಶ್ರೀ. ಆ ಸೋಲಿಗೆ ಹಲವು ಕಾರಣಗಳು ಇದ್ದವು. ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಟಿಕೆಟ್‌ಗೆಹಲವರು ಆಕಾಂಕ್ಷಿಯಾಗಿದ್ದರು. ಅವರನ್ನೆಲ್ಲಾ ಬದಿಗೊತ್ತಿ ಉಮಾಶ್ರೀ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಇದರ ಜತೆಗೆ ಉಮಾಶ್ರೀ ‘ಹೊರಗಿನವರು’ ಎಂಬ ಪ್ರಚಾರವೂ ಚೆನ್ನಾಗಿ ನಡೆಯಿತು. ಹೀಗಾಗಿ ಅವರು ಮೊದಲ ಚುನಾವಣೆಯಲ್ಲೇ ಪರಾಜಿತರಾಗಬೇಕಾಯಿತು.

ಆ ಸೋಲಿನ ಬಳಿಕ ಉಮಾಶ್ರೀ ಸುಮ್ಮನೆ ಕೂರಲಿಲ್ಲ. ತೇರದಾಳದಲ್ಲೇ ಮನೆ ಮಾಡಿದರು. ಪಕ್ಷ ಕಟ್ಟಿದರು. ‘ಹೊರಗಿನವಳು’ ಎಂಬ ಭಾವನೆಯನ್ನು ಜನಮಾನಸದಲ್ಲಿ ನಿಧಾನವಾಗಿ ಅಳಿಸಿ ‘ಒಳಗಿನವಳು’ ಆಗಿಬಿಟ್ಟರು. ತೇರದಾಳದಲ್ಲಿ ನೇಕಾರ ಸಮುದಾಯದ ಪ್ರಾಬಲ್ಯವಿದೆ. ಉಮಾಶ್ರೀ ಕೂಡ ಅದೇ ಸಮುದಾಯದವರೇ ಆಗಿರುವುದರಿಂದ, ನೇಕಾರರ ಬೆಂಬಲ ಅವರಿಗೆ ಸಿಕ್ಕಿತು.

ಜತೆಗೆ ಕಾಂಗ್ರೆಸ್‌ನ ಹಿರಿಯ ತಲೆಯಾಳು ಹಳಿಂಗಳಿ ದೇಸಾಯಿ ಅವರ ಕೃಪೆಯೂ ಲಭಿಸಿತು. ಹೀಗಾಗಿ ಉಮಾಶ್ರೀ ಪ್ರಬಲರಾದರು. 2013ರ ಚುನಾವಣೆಯಲ್ಲಿ ಜಾತಿ ಬಲ, ಸಿನಿಮಾ ನಟಿ ಎಂಬ ವರ್ಚಸ್ಸು, ಐದು ವರ್ಷ ಕಚ್ಚಾಟದಲ್ಲಿ ಮುಳುಗಿದ್ದ ಬಿಜೆಪಿ ಹೋಳಾಗಿ ಕೆಜೆಪಿ ಉದಯಿಸಿದ್ದು ಈ ಎಲ್ಲ ಅಂಶಗಳೂ ಉಮಾಶ್ರೀ ಅವರಿಗೆ ವರದಾನವಾದವು. ಬಿಜೆಪಿಯ ಸಿದ್ದು ಸವದಿ ಎದುರು 2548  ಮತಗಳಿಂದ ಉಮಾಶ್ರೀ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಪರಿಸ್ಥಿತಿ ಹೇಗಿದೆ?: ಶಾಸಕಿಯಾಗಿ ಆಯ್ಕೆಯಾದ ಉಮಾಶ್ರೀ ಅವರಿಗೆ ಮಂತ್ರಿ ಪಟ್ಟ ಕೂಡ ಒಲಿದಿದ್ದರೂ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎನ್ನುವ ಆರೋಪ ಇದೆ. ಆದರೆ ತಕ್ಕ ಮಟ್ಟಿನ ಕೆಲಸಗಳಂತೂ ಆಗಿವೆ. ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ನೇಕಾರರ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದರೆ ನೇಕಾರರು, ರೈತರ ಸಾಲ ಮನ್ನಾ ಉಮಾಶ್ರೀ ನೆರವಿಗೆ ಬರಲಿವೆ ಎನ್ನಲಾಗುತ್ತಿದೆ. ಉಮಾಶ್ರೀ ವಿರುದ್ಧ ಕಣಕ್ಕಿಳಿಯುತ್ತಿರುವ ಬಿಜೆಪಿಯ ಸಿದ್ದು ಸವದಿ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಮಿತ್ ಶಾ ಮೋಡಿಯನ್ನು ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಉಮಾಶ್ರೀ ಹಾಗೂ ಬಿಜೆಪಿಯ ಸಿದ್ದು ಸವದಿ ಅವರಿಗೆ ಎದುರಾಳಿಯಾಗಿ ಶಿಕ್ಷಣ ಪ್ರೇಮಿ ಬಸವರಾಜ ಕೊಣ್ಣೂರ ಅವರು ಜೆಡಿಎಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಕುರುಬ ಸಮಾಜಕ್ಕೆ ಸೇರಿದವರು ಅವರಾಗಿದ್ದಾರೆ. ಕೊಣ್ಣೂರ ಗಳಿಸುವ ಒಂದೊಂದೂ ಮತವೂ ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ನಿರ್ಣಾಯಕವಾಗುವ ಲಕ್ಷಣಗಳಿವೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶಿವಸೇನೆಯಿಂದ, ಕೆಜೆಪಿಯಿಂದ ಆ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರು ಸ್ಪರ್ಧೆ ಮಾಡಲು ಸಜ್ಜಾಗಿದ್ದಾರೆ.

Follow Us:
Download App:
  • android
  • ios