ಲಂಡನ್‌[ಅ.03]: ಭಾರತ ಮತ್ತು ಪಾಕಿಸ್ತಾನದ ನಡುವಣ ಕಾನೂನು ಹೋರಾಟಕ್ಕೆ ಕಾರಣವಾಗಿದ್ದ 70 ವರ್ಷಗಳ ಹಿಂದಿನ ಹೈದರಾಬಾದ್‌ ನಿಜಾಮ ಕಾಲದ ಪ್ರಕರಣವೊಂದರಲ್ಲಿ ಭಾರತಕ್ಕೆ ಜಯವಾಗಿದೆ. ಇದೇ ವೇಳೆ ನಿಜಾಮರಿಗೆ ಸೇರಿದ 305 ಕೋಟಿ ರು. ಹಣದ ಮೇಲೆ ಹಕ್ಕು ಸಾಧಿಸಲು ಹೊರಟಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಮತ್ತೊಂದೆಡೆ ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಬುಧವಾರ ನೀಡಿರುವ ತೀರ್ಪನ್ನು ಭಾರತ ಮತ್ತು ನಿಜಾಮರ ವಂಶಸ್ಥರು ಸ್ವಾಗತಿಸಿದ್ದಾರೆ.

ಏನಿದು ಪ್ರಕರಣ?: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಹೈದ್ರಾಬಾದ್‌, ಭಾರತದ ತೆಕ್ಕೆಗೆ ಬಂದಿರಲಿಲ್ಲ. ಈ ನಡುವೆ ಯಾವುದೇ ಸಂದರ್ಭದಲ್ಲಿ ಭಾರತ ತನ್ನ ಮೇಲೆ ದಾಳಿ ಮಾಡಬಹುದು ಎಂದೆಣಿಸಿದ್ದ ಹೈದ್ರಾಬಾದ್‌ ನಿಜಾಮ ಅಸಫ್‌ ಝಾ 1948ರಲ್ಲಿ ಬ್ರಿಟನ್‌ನ ಲಂಡನ್‌ ಬ್ಯಾಂಕ್‌ ಶಾಖೆಯಲ್ಲಿನ ಪಾಕಿಸ್ತಾನದ ರಾಯಭಾರಿ ಖಾತೆಗೆ 1 ದಶಲಕ್ಷ ಪೌಂಡ್‌ (ಅಂದಾಜು 7 ಕೋಟಿ ರು.) ವರ್ಗಾಯಿಸಿದ್ದರು. ಆದರೆ ಕೆಲ ದಿನಗಳ ಬಳಿಕ, ತಮಗೆ ಗೊತ್ತಿಲ್ಲದೆಯೇ ಹಣ ವರ್ಗಾವಣೆ ಆಗಿದೆ. ಹೀಗಾಗಿ ಹಣವನ್ನು ಮರಳಿ ತಮ್ಮ ಖಾತೆಗೆ ಹಾಕಬೇಕೆಂದು ಕೋರಿದ್ದರು. ಆದರೆ ಪಾಕಿಸ್ತಾನ ಸರ್ಕಾರದ ಸಮ್ಮತಿ ಇಲ್ಲದೆಯೇ ಹಣ ಮರಳಿಸುವುದು ಸಾಧ್ಯವಿಲ್ಲ ಎಂದು ಬ್ಯಾಂಕ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ವಿರುದ್ಧ ಅಸಫ್‌ ಕೇಸು ದಾಖಲಿಸಿದ್ದರು.

ಈ ನಡುವೆ 2013ರಲ್ಲಿ ಪ್ರಕರಣಕ್ಕೆ ಮಧ್ಯಪ್ರವೇಶ ಮಾಡಿದ್ದ ಪಾಕಿಸ್ತಾನ, ನಾವು ಹೈದರಾಬಾದ್‌ ನಿಜಾಮರಿಗೆ ಭಾರತದ ದಾಳಿಯಿಂದ ರಕ್ಷಿಸಿಕೊಳ್ಳಲು ಶಸ್ತ್ರಾಸ್ತ್ರ ಪೂರೈಸಿದ್ದಕ್ಕಾಗಿ ಈ ಹಣ ನಮಗೆ ರವಾನಿಸಲಾಗಿತ್ತು ಎಂದು ವಾದ ಮಾಡಿತ್ತು. ಅಲ್ಲದೆ ಭಾರತ ಸರ್ಕಾರ ಹೈದ್ರಾಬಾದ್‌ ಮೇಲೆ ಅಕ್ರಮವಾಗಿ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡಿದೆ. ಹೀಗಾಗಿ ಹಣ ಆ ದೇಶಕ್ಕೆ ನೀಡಲಾಗದು ಎಂದೆಲ್ಲಾ ವಾದ ಮಾಡಿತ್ತು.

ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್‌, ನಿಜಾಮರಿಗೆ ಪಾಕಿಸ್ತಾನ ಶಸ್ತ್ರಾಸ್ತ್ರ ನೀಡಿದ ಮಾಹಿತಿ ಇದೆಯಾದರೂ, ಅದೇ ಕಾರಣಕ್ಕೆ ಹಣ ಕೊಟ್ಟಿದ್ದು ಖಚಿತವಿಲ್ಲ ಎಂದು ಹೇಳಿ, ಪಾಕ್‌ ವಾದವನ್ನು ವಜಾಮಾಡಿ. ಹಣ ಭಾರತಕ್ಕೆ ಸೇರಬೇಕು ಎಂದು ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ನಿಜಾಮನ ವಂಶಸ್ಥರು ಮತ್ತು ಕೇಂದ್ರ ಸರ್ಕಾರ ಒಂದಾಗಿ ಹೋರಾಟ ನಡೆಸಿದ್ದ ಕಾರಣ 305 ಕೋಟಿ ರು. ಹಣದಲ್ಲಿ ಯಾರಾರ‍ಯರಿಗೆ ಎಷ್ಟೆಷ್ಟುಪಾಲು ಸಿಗಲಿದೆ ಎನ್ನುವುದು ಖಚಿತಪಟ್ಟಿಲ್ಲ.