ಶಿರೂರು ಸ್ವಾಮೀಜಿ ಸಾವಿನ ರಿಪೋರ್ಟ್ ಪೊಲೀಸರಿಗೆ : ಏನಿದೆ ವರದಿಯಲ್ಲಿ?
ಉಡುಪಿ ಕೃಷ್ಣ ಮಠದ ಶಿರೂರು ಸ್ವಾಮೀಜಿ ಸಾವಿನ ಸಂಬಂಧದ ವರದಿಯನ್ನು ಇದೀಗ ಮಣಿಪಾಲದ ಕೆಎಂಸಿ ವೈದ್ಯರ ತಂಡ ಪೊಲೀಸರಿಗೆ ಸಲ್ಲಿಸಿದೆ. ಈ ವರದಿಯಲ್ಲಿ ಸ್ವಾಮೀಜಿ ಸಾವು ಸಹಜವೆಂದು ತಿಳಿಸಲಾಗಿದೆ.
ಉಡುಪಿ: ಶಿರೂರು ಸ್ವಾಮೀಜಿ ದೇಹದಲ್ಲಿ ಯಾವುದೇ ರೀತಿಯ ವಿಷದ ಅಂಶ ಪತ್ತೆಯಾಗಿಲ್ಲ. ಸ್ವಾಮೀಜಿಯ ಸಾವು ಸಹಜ ಎಂದು ಕೆಎಂಸಿ ವೈದ್ಯರ ತಂಡ ವರದಿ ನೀಡಿದೆ.
ಈ ಬಗ್ಗೆ ಅಂತಿಮ ವರದಿಯನ್ನು ಪೊಲೀಸರಿಗೆ ಹಸ್ತಾಂತರ ಮಾಡಿದೆ. ಸ್ವಾಮೀಜಿ ಸಾವು ಯುಡಿಆರ್ ಪ್ರಕರಣವಾದ ಕಾರಣ ಎಸಿಗೆ ವರದಿ ಹಸ್ತಾಂತರ ಮಾಡಲಾಗಿದೆ.
ಶಿರೂರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯೇ ಆಗಿಲ್ಲ. ವಿಷ ಇಲ್ಲವೆಂದು ಎಫ್ ಎಸ್ ಎಲ್ ವರದಿಯಲ್ಲೂ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ವರದಿ ಎಫ್ ಎಸ್ ಎಲ್ ವರದಿ ಎರಡಲ್ಲೂ ಸಹಜ ಸಾವು ಎಂದೇ ಉಲ್ಲೇಖ ಮಾಡಲಾಗಿದೆ.
ಸ್ವಾಮೀಜಿಯ ಸಾವಿಗೆ ಅನ್ನನಾಳದಲ್ಲಿ ಆದ ರಕ್ತಸ್ರಾವ ಹಾಗೂ ಕ್ರೋನಿಕ್ ಲಿವರ್ ಸಿರಾಸಿಸ್ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜುಲೈ 19 ರಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಸ್ವಾಮೀಜಿ ನಿಧನರಾಗಿದ್ದರು.