ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದೆ. ನೋಟು ಅಮಾನ್ಯ ಕ್ರಮ ಹಾಗೂ ಜಿಎಸ್ಟಿ ವ್ಯವಸ್ಥೆಯನ್ನು ಪಕ್ಷದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿರುವ ಸಂದರ್ಶನದಲ್ಲಿ ಟೀಕಿಸಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ದೇಶದಲ್ಲಿ ಸ್ವಚ್ಛಂದವಾಗಿ ಕೇಂದ್ರೀಕರಣ ನಡೆಸುತ್ತಿದ್ದಾರೆಂದು ಹರಿಹಾಯ್ದಿದ್ದಾರೆ.
ಮುಂಬೈ: ಬಿಜೆಪಿ ಮಿತ್ರ ಪಕ್ಷ ಶಿವಸೇನೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದೆ.
ನೋಟು ಅಮಾನ್ಯ ಕ್ರಮ ಹಾಗೂ ಜಿಎಸ್ಟಿ ವ್ಯವಸ್ಥೆಯನ್ನು ಪಕ್ಷದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿರುವ ಸಂದರ್ಶನದಲ್ಲಿ ಟೀಕಿಸಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಪ್ರಧಾನಿ ಮೋದಿ ದೇಶದಲ್ಲಿ ಸ್ವಚ್ಛಂದವಾಗಿ ಕೇಂದ್ರೀಕರಣ ನಡೆಸುತ್ತಿದ್ದಾರೆಂದು ಹರಿಹಾಯ್ದಿದ್ದಾರೆ.
ಜಿಎಸ್ಟಿ ಬಗ್ಗೆ ಮಾತನಾಡಿದ ಠಾಕ್ರೆ, ದೇಶಕ್ಕೆ ಬೇಕಾಗಿರುವುದೋ ಕೇಂದ್ರೀಕರಣವೋ, ವಿಕೇಂದ್ರೀಕರಣವೋ? ಪ್ರಧಾನಿಯಾಗಿದ್ದಾಗ ರಾಜೀವ್ ಗಾಂಧಿ ಪಂಚಾಯತ್’ಗಳಿಗೆ ಸ್ವಾಯತ್ತತೆ ನೀಡಿದರು, ಮೋದಿ ಆ ಸ್ವಾಯತ್ತತೆಯನ್ನು ಹಿಂಪಡೆದಿದ್ದಾರೆ, ಹಾಗೂ ಸ್ವಚ್ಛಂದವಾಗಿ ಕೇಂದ್ರೀಕರಣ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಮಿತ್ರಪಕ್ಷದ ಮುಖ್ಯಸ್ಥನಾಗಿರುವ ಠಾಕ್ರೆ, ಸುಧಾರಣೆಗಳು ಅಗತ್ಯ, ಆದರೆ ‘ಸ್ವಲ್ಪ ನಿಂತು’ ಅವುಗಳು ಬೀರಿರುವ ಪರಿಣಾಮಗಳನ್ನು ಪರಿಶೀಲಿಸುವುದು ಅಷ್ಟೇ ಅಗತ್ಯವೆಂದಿದ್ದಾರೆ.
ಸರ್ಕಾರದ ಜಾಹೀರಾತುಗಳನ್ನು ನೋಡಿದರೆ ಎಲ್ಲವೂ ಸರಿಯಾಗಿದೆ ಎಂದು ಅನಿಸುತ್ತದೆ, ಆದರೆ ವಾಸ್ತವ ಸ್ಥಿತಿಯನ್ನೂ ನೋಡಬೇಕು ಎಂದು ಅವರು ಟೀಕಿಸಿದ್ದಾರೆ.
ಜನರ ಅಭಿಪ್ರಾಯಕ್ಕೆ ಬೆಲೆಯಿಲ್ಲವೆ? ಆಡಳಿತವು ಕೇವಲ ಒಬ್ಬ ಪ್ರಧಾನಿಯ ಮೇಲೆ ಅವಲಂಬಿತವಾಗಿದ್ದರೆ, ದೇಶದಲ್ಲಿ ನಿಜವಾಗಿಯೂ ಪ್ರಜಾತಂತ್ರ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ನೋಟು ಅಮಾನ್ಯ ಮಾಡಿದ ಬಳಿಕ ನಾಲ್ಕು ತಿಂಗಳಿನಲ್ಲಿ 15 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ಧಾರೆ ಎಂದು ಓದಿದೆ. ಅದರರ್ಥ 60 ಲಕ್ಷ ಕುಟುಂಬಗಳ ಮೇಲೆ ಅದು ಪರಿಣಾಮ ಬೀರಿದೆ. ಉದ್ಯೋಗ ಕಳೆದುಕೊಂಡವರ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಠಾಕ್ರೆ ಹೇಳಿದ್ದಾರೆ.
