ಕೇರಳದಲ್ಲಿ ಪತ್ತೆಯಾದ ಬಾವಲಿ ಜ್ವರದ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ

Two suspected cases of Nipah virus reported from Karnataka
Highlights

ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ‘ಬಾವಲಿ ಜ್ವರ’ (ನಿಪಾ ವೈರಸ್‌) ರಾಜ್ಯದಲ್ಲೂ ಹರಡದಂತೆ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಮುಂದುವರೆಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಕ್ಕಾಗಿ ಮೇ 24ರಂದು ರಾಜ್ಯದ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ಆಯೋಜಿಸಲಾಗಿದೆ.

ಬೆಂಗಳೂರು:  ಕೇರಳದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಣಾಂತಿಕ ‘ಬಾವಲಿ ಜ್ವರ’ (ನಿಪಾ ವೈರಸ್‌) ರಾಜ್ಯದಲ್ಲೂ ಹರಡದಂತೆ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ಮುಂದುವರೆಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಕ್ಕಾಗಿ ಮೇ 24ರಂದು ರಾಜ್ಯದ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆಗಳನ್ನು ಆಯೋಜಿಸಲಾಗಿದೆ.

ಈ ನಡುವೆ, ಮಂಗಳೂರಿನಲ್ಲಿ ಮಂಗಳವಾರ ವರದಿಯಾಗಿದ್ದ ಎರಡು ಶಂಕಿತ ನಿಪಾ ವೈರಾಣು ಪ್ರಕರಣಗಳು ಸಂಪೂರ್ಣ ಖಚಿತಪಟ್ಟಿಲ್ಲ. 74 ವರ್ಷದ ಶಂಕಿತ ವ್ಯಕ್ತಿಯು ನ್ಯುಮೋನಿಯಾ ಸಮಸ್ಯೆಯಿಂದ ಬಳಲುತ್ತಿರುವುದು ಖಚಿತಪಟ್ಟಿದ್ದು, ನಿಪಾ ಸೋಂಕಿನಿಂದ ಅಲ್ಲ ಎಂಬುದು ದೃಢವಾಗಿದೆ.

ಇನ್ನು 20 ವರ್ಷದ ಸ್ಟಿಫಿ ಎಂಬ ಯುವತಿಯಲ್ಲಿ ನಿಪಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಕೇರಳದ ಕಾಸರಗೋಡು ಮೂಲದವರಾಗಿರುವ ಕಾರಣದಿಂದ ವಿಶೇಷ ಕಾಳಜಿ ವಹಿಸಿದ್ದೇವೆ. ಅವರಲ್ಲಿ ಜ್ವರ ಹತೋಟಿಗೆ ಬಂದಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿದ್ದೇವೆ. ಮಾದರಿಗಳನ್ನು ಪುಣೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಂಶೋಧನಾಧಿಕಾರಿ ಶರೀಫ್‌ ತಿಳಿಸಿದ್ದಾರೆ.

ಪರೀಕ್ಷೆ:

ಉತ್ತರ ಕೇರಳದಲ್ಲಿ ನಿಪಾ ವೈರಸ್‌ ವ್ಯಾಪಕವಾಗುತ್ತಿದೆ. ಜತೆಗೆ ಮಂಗಳೂರಿನಲ್ಲೂ ಶಂಕಿತ ಸೋಂಕು ಪ್ರಕರಣ ಪತ್ತೆಯಾಗಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಆಗಮಿಸುತ್ತಿರುವವರ ಮೇಲೆ ವಿಶೇಷ ನಿಗಾ ವಹಿಸಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ನಿಪಾ ವೈರಾಣು ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮೇ 24ರಂದು ಆಯಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಅಬಕಾರಿ ಇಲಾಖೆ ಸೇರಿದಂತೆ ನಗರದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳ ಅಧೀಕ್ಷಕರು, ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ಮಕ್ಕಳ ವೈದ್ಯ ಸಂಘದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ವಿಶೇಷ ನಿಗಾ:

ಮಂಗಳೂರಿನಲ್ಲಿ ಶಂಕಿತ ನಿಪಾ ವೈರಸ್‌ ಪ್ರಕರಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಗಡಿ ಭಾಗಗಳ ಜಿಲ್ಲಾ​ಧಿಕಾರಿಗಳ ಆಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿ, ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದೆ.

ಶಂಕಿತರನ್ನು ಪತ್ತೆ ಹಚ್ಚಲು ತುರ್ತು ಪರಿಶೀಲನಾ ತಂಡಗಳನ್ನು ರಚಿಸಿದ್ದು, ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಹಾಗೂ ರಕ್ತ, ಗಂಟಲು ಮತ್ತು ಮೂಗಿನ ದ್ರವಗಳನ್ನು ಪಡೆದು ಪರೀಕ್ಷೆಗೆ ಕಳುಹಿಸುವುದು, ಪ್ರತ್ಯೇಕವಾಗಿ ಚಿಕಿತ್ಸೆ ಮುಂದುವರೆಸುವುದು, ವೈದ್ಯರು ಕೈಗೊಳ್ಳಬೇಕಾದ ಜಾಗೃತಿ ಮುಂತಾದ ವಿಚಾರಗಳ ಕುರಿತು ಮಾಹಿತಿ ನೀಡಲಾಗಿದೆ. ಜತೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಎಲ್ಲ ಜಿಲ್ಲೆಗಳ ಜಿಲ್ಲಾ​ಧಿಕಾರಿ ಹಾಗೂ ವೈದ್ಯಾಧಿಕಾರಿಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು ಅದನ್ನು ಆಧರಿಸಿ ಕಾರ್ಯ ನಿರ್ವಹಿಸುವಂತೆ ಸೂಚಿಸಿಲಾಗಿದೆ.

ಕೇರಳದ 4 ಜಿಲ್ಲೆಗೆ ಹೋಗಬೇಡಿ:

ಉತ್ತರ ಕೇರಳದಲ್ಲಿ ನಿಪಾ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಿಂದಲೂ ಪ್ರವಾಸ ಮತ್ತಿತರ ಕಾರಣಗಳಿಗೆ ಕೇರಳಕ್ಕೆ ಹೋಗುವವರು ಉತ್ತರ ಕೇರಳದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡದಿರುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.  ಕೇರಳದ ಕಣ್ಣೂರು, ವಯನಾಡು, ಕೋಳಿಕ್ಕೋಡ್‌, ಮಲಪ್ಪುರಂನಲ್ಲಿ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಕೇರಳ ಆರೋಗ್ಯ ಇಲಾಖೆ ಸೂಚಿಸುವವರೆಗೂ ಈ ಭಾಗಗಳಿಗೆ ಭೇಟಿ ನೀಡದಿರುವುದು ಒಳಿತು ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರೋಗ ಪತ್ತೆಗೆ ಕ್ಷಿಪ್ರ ತಂಡ

ನಿಪಾ ಪತ್ತೆಗಾಗಿ ರಾಜ್ಯ ಆರೋಗ್ಯ ಇಲಾಖೆ ರಚಿಸಿದ್ದ ಕ್ಷಿಪ್ರ ಪರಿಶೀಲನಾ ತಂಡ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದೆ. ಬುಧವಾರವೂ ಹೊರ ರಾಜ್ಯಗಳಿಂದ ಅದರಲ್ಲೂ ಕೇರಳ ಭಾಗದಿಂದ ಆಗಮಿಸಿದವರನ್ನು ತಪಾಸಣೆಗೆ ಒಳಪಡಿಸಿದ್ದು, ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಕೇರಳದಿಂದ ಬಂದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಬಗ್ಗೆ ಆಶಾ ಕಾರ್ಯಕರ್ತರು ನಿಗಾ ಇಡಲಿದ್ದಾರೆ. ಅವರಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಕೂಡಲೇ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಸಹಾಯವಾಣಿ ‘104’

ರಾಜ್ಯದ ಜನರಿಗೆ ನಿಪಾ ವೈರಸ್‌ ಬಗ್ಗೆ ಮಾಹಿತಿ ನೀಡಲು ಆರೋಗ್ಯ ಇಲಾಖೆ 104 ಸಹಾಯವಾಣಿ ವ್ಯವಸ್ಥೆ ಕಲ್ಪಿಸಿದೆ. ಬುಧವಾರ ಆರು ಮಂದಿ ಸಹಾಯವಾಣಿಗೆ ಕರೆ ಮಾಡಿದ್ದು, ತಮ್ಮ ಅನುಮಾನಗಳಿಗೆ ಪರಿಹಾರ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

loader