ದೇಶಾದ್ಯಂತ ಭಾರೀ ಸುದ್ದಿಯಾಗ್ತಿರುವ ಸೂಸೈಡ್ ಗೇಮ್ ಬ್ಲೂವೇಲ್ಗೆ ಮತ್ತೆರಡು ಜೀವಗಳು ಬಲಿಯಾಗಿವೆ. ವಿಶ್ವದೆಲ್ಲೆಡೆ ಸುಮಾರು 100ಕ್ಕೂ ಹೆಚ್ಚು ಮಂದಿ ಈ ಆಟದಲ್ಲಿ ಸಾವಿನ ಮನೆ ಸೇರಿದ್ದು ಸೂಕ್ತ ಕ್ರಮಕ್ಕೆ ಸಚಿವೆ ಮನೇಕಾಗಾಂಧಿ ಪತ್ರ ಬರೆದಿದ್ದಾರೆ.
ಬೆಂಗಳೂರು(ಸೆ.02): ಬ್ಲೂವೇಲ್ ಗೇಮ್. ಸೂಸೈಡ್ ಗೇಮ್ ಅಂತಾನೇ ಕರೆಯಲ್ಪಡುವ ಈ ಆನ್'ಲೈನ್ ಆಟಕ್ಕೆ ಒಂದಲ್ಲ, ಎರಡಲ್ಲ ನೂರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಅದರಲ್ಲೂ ಮಕ್ಕಳೇ ಬಲಿಯಾಗ್ತಿದ್ದಾರೆ. ಯುವಕ, ಯುವತಿಯರು ಕೂಡಾ ಈ ಆಟದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗ್ತಿದ್ದು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಬ್ಲೂವೇಲ್ ಗೇಮ್ಗೆ ಮತ್ತೆರಡು ಬಲಿ
ಈ ಸಾವಿನ ಆಟ ಇತ್ತೀಚೆಗಷ್ಟೇ ಕರ್ನಾಟಕದಲ್ಲೂ 11 ವರ್ಷದ ಬಾಲಕಿಯನ್ನು ಬಲಿ ಪಡೆದುಕೊಂಡಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ 15 ವರ್ಷ ಬಾಲಕ ಬ್ಲೂವೇಲ್ ಗೇಮ್ಗೆ ಬಲಿಯಾಗಿದ್ದಾನೆ. ಕೈ ಕೊಯ್ದುಕೊಂಡಿದ್ದಲ್ಲದೆ ಎತ್ತರದ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇನ್ನು ಪುದುಚೇರಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವ ವಿದ್ಯಾರ್ಥಿನಿ, ಬ್ಲೂವೇಲ್ ಗೇಮ್ ಆಟವಾಡುತ್ತಾ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
2013 ರಲ್ಲಿ ಹುಟ್ಟಿಕೊಂಡ ಈ ಬ್ಲೂ ವೇಲ್ ಆಟಕ್ಕೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿತ್ತು. ಮುಂಬೈ, ಉತ್ತರ ಪ್ರದೇಶ ಮತ್ತು ಕೇರಳ ಸೇರಿದಂತೆ ಕರ್ನಾಟಕದಲ್ಲೂ ಈ ಆಟ, ಮಕ್ಕಳ ಪ್ರಾಣಕ್ಕೆ ಸಂಚಾಕಾರ ತಂದಿದೆ. ಮತ್ತೊಂದು ವಿಷ್ಯ ಅಂದ್ರೆ ಈ ಸಾವಿನ ಆಟ ಬ್ಲೂವೇಲ್ನ ಮಾಸ್ಟರ್ ಮೈಂಡ್ 17 ವರ್ಷದ ಯುವತಿಯನ್ನು ಈಗಾಗಲೇ ರಷ್ಯಾದಲ್ಲಿ ಬಂಧಿಸಲಾಗಿದೆ.
ಇನ್ನು ಬ್ಲೂ ವೇಲ್ ಗೇಮ್ ದೇಶಾದ್ಯಂತ ಭಾರೀ ಚರ್ಚೆಯಾಗ್ತಿದ್ದಂತೆ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ, ಗೃಹ ಸಚಿವರು ಮತ್ತು ಐಟಿ ಸಚಿವರಿಗೆ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಬ್ಲೂ ವೇಲ್ ಗೇಮ್ ಬ್ಲಾಕ್ ಮಾಡುವಂತೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ದೇಶದ ಎಲ್ಲಾ ಶಾಲಾ ಪ್ರಾಮಶುಪಾಲರಿಗೆ ಮನೇಕಾ ಎಚ್ಚರಿಕೆ ಪಾಠ ಹೆಳಿದ್ದಾರೆ. ಈ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡಾ ಬ್ಲೂ ವೇಲ್ ಗೇಮ್ ರದ್ದುಗೊಳಿಸುವಂತೆ ಪ್ರಧಾನಿಗೆ ಪತ್ರ ಬರೆದಿದ್ದರು..
ಪ್ರಾಂಶುಪಾಲರಿಗೆ ಮನೇಕಾ ಪತ್ರ
ಬ್ಲೂವೇಲ್ ಗೇಮ್ಗೆ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ನನಗೆ ವಿಷಾದವಿದೆ. ಅದರಲ್ಲೂ ಯುವಕ, ಯುವತಿಯರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಬೇಸರದ ವಿಷಯ. ದೇಶದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ನಾನು ಹೇಳುವುದೇನೆಂದರೆ, ಬ್ಲೂವೇಲ್ ಗೇಮ್ಗೆ ಮಕ್ಕಳು ಬಲಿಯಾಗದಂತೆ ಹೆಚ್ಚಿನ ಗಮನ ವಹಿಸಿ. ಮಕ್ಕಳ ನಡವಳಿಕೆ ವೇಲೆ ನಿಗಾ ಇಡಿ. ಒಂದು ವೇಳೆ ವಿದ್ಯಾರ್ಥಿ ಈ ಆಟದಲ್ಲಿ ತೊಡಗಿರುವುದು ತಿಳಿದು ಬಂದರೆ ದಯವಿಟ್ಟು ಪೋಷಕರ ಗಮನಕ್ಕೆ ತನ್ನಿ. ಜೊತೆಗೆ ವಿದ್ಯಾರ್ಥಿಗೆ ಬುದ್ಧಿ ಮಾತು ಹೇಳಿ. ಕೂಡಲೇ ಎಚ್ಚೆತ್ತುಕೊಂಡರೆ ಮಕ್ಕಳು ಬಲಿಯಾವುದನ್ನು ತಡೆಯಬಹುದು.
ಒಟ್ನಲ್ಲಿ ಆಟ ಆಡ್ತಾ ಆಡ್ತಾ ಮಕ್ಕಳು ಸಾವಿನ ಮನೆ ಸೇರ್ತಿರೋದು ನಿಜಕ್ಕೂ ದುರಂತ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಈ ಬ್ಲೂ ವೇಲ್ ಗೇಮ್ಗೆ ಕಡಿವಾಣ ಹಾಕಬೇಕಿದೆ. ಇಲ್ಲಾ ಅಂದ್ರೆ ಮತ್ತಷ್ಟು ಮಂದಿ ಬಲಿಯಾಗೋದಂತೂ ಗ್ಯಾರೆಂಟಿ.
