ಯಶವಂತಪುರದ ವೃದ್ಧೆಯೊಬ್ಬರ ಅಪಾರ್ಟ್​ಮೆಂಟ್​ನಲ್ಲಿದ್ದ 2.89 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಹಣದಲ್ಲಿ 2 ಸಾವಿರ ಮುಖಬೆಲೆಯ 2.25 ಕೋಟಿ ರೂ. ಪತ್ತೆಯಾಗಿದೆ. ಇನ್ನು ನಿನ್ನೆ ರಾತ್ರಿಯಿಂದಲೇ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾಳಧನಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು(ಡಿ.14): ರಾಜ್ಯಾದ್ಯಂತ ಕಪ್ಪು ಕುಳಗಳ ವಿರುದ್ಧ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಒಟ್ಟು 2.89 ಕೋಟಿ ನಗದನ್ನು ವಶಕ್ಕೆ ಪಡೆದಿದ್ದಾರೆ.

ಯಶವಂತಪುರದ ವೃದ್ಧೆಯೊಬ್ಬರ ಅಪಾರ್ಟ್​ಮೆಂಟ್​ನಲ್ಲಿದ್ದ 2.89 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಹಣದಲ್ಲಿ 2 ಸಾವಿರ ಮುಖಬೆಲೆಯ 2.25 ಕೋಟಿ ರೂ. ಪತ್ತೆಯಾಗಿದೆ. ಇನ್ನು ನಿನ್ನೆ ರಾತ್ರಿಯಿಂದಲೇ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾಳಧನಿಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದಾಗ ಫ್ಲಾಟ್​ ನಂಬರ್​ ಎ-508ನಲ್ಲಿದ್ದ ಶಕೀಲಾ ಶೆಟ್ಟಿ ಐಟಿ ಅಧಿಕಾರಿಗಳ ಮೇಲೆ ನಾಯಿಗಳನ್ನು ಚೂ ಬಿಟ್ಟಿದ್ದಾಳೆ. ನಾಯಿಗಳಿಗೆ ಹೆದರಿದ ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವು ಪಡೆದು ಫ್ಲಾಟ್​ ಪ್ರವೇಶಿಸಿ ಫ್ಲಾಟ್​ನಲ್ಲಿದ್ದ ಹಣ ವಶಪಡಿಸಿಕೊಂಡಿದ್ದಾರೆ. ಆನಂದ್​ ಎಂಬ ಉದ್ಯಮಿಗೆ ಈ ಹಣ ಸೇರಿದ್ದು ಎಂದು ಐಟಿ ಮೂಲಗಳು ತಿಳಿಸಿವೆ.

ನೋಟು ನಿಷೇಧದ ಬಳಿಕ ಭ್ರಷ್ಟ ಕುಳಗಳನ್ನು ಬೆನ್ನು ಹತ್ತಿರುವ ಐಟಿ ಅಧಿಕಾರಿಗಳು ಇದುವರೆಗೆ ರಾಜ್ಯದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ಅಕ್ರಮ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದಾರೆ. 30 ಕೋಟಿಯಷ್ಟು ನಗದು ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 20 ಕೋಟಿಯಷ್ಟು ಹಣ 2 ಸಾವಿರ ಮುಖಬೆಲೆಯ ನೋಟುಗಳು. ಇನ್ನು ಬ್ಲಾಕ್​ ಮನಿಯಿಂದ ಖರೀದಿಸಲಾದ 55 ಕೆಜಿಯಷ್ಟು ಚಿನ್ನವನ್ನು ಇದುವರೆಗಿನ ಐಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಯಶವಂತಪುರದಲ್ಲಿ ಪತ್ತೆಯಾಗಿರುವ ಅಕ್ರಮ 2.89 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಐಟಿಯಿಂದ ಮಾಹಿತಿ ಪಡೆದು ಎಫ್​ಐಆರ್​ ದಾಖಲಿಸಿಕೊಳ್ಳಲಿದ್ದಾರೆ. ಈಗಾಗಲೇ ಬ್ಲ್ಯಾಕ್​ ಅಂಡ್​ ವೈಟ್​ ದಂಧೆ ಸಂಬಂಧ ಸಿಬಿಐ ನಾಲ್ಕು ಎಫ್​ಐಆರ್​ ದಾಖಲಿಸಿ ತನಿಖೆ ಕೂಡ ನಡೆಸುತ್ತಿದೆ.