Asianet Suvarna News Asianet Suvarna News

‘ಬ್ರಾಹ್ಮಣ ಪ್ರಭುತ್ವ ನಾಶ ಮಾಡಿ’ ಪೋಸ್ಟರ್‌ ಹಿಡಿದ ಟ್ವಿಟರ್ ಸಿಇಒ!

ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದ ಡೋರ್ಸಿ ಅವರು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆದಿಯಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದರು. ಈ ವೇಳೆ ಸಮಾಜದ ಹಲವು ವರ್ಗಗಳ ಕಾರ್ಯಕರ್ತರನ್ನು ಕೂಡ ಅವರು ಭೇಟಿ ಮಾಡಿದ್ದರು.

Twitter CEO Jack Dorsey upsets Hindu nationalists during India visit
Author
Bangalore, First Published Nov 21, 2018, 9:58 AM IST

ನವದೆಹಲಿ[ನ.21]: ಹೆಸರಾಂತ ಸಾಮಾಜಿಕ ಮಾಧ್ಯಮವಾದ ‘ಟ್ವಿಟರ್‌’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾಕ್‌ ಡೋರ್ಸಿ ಅವರು ‘ಬ್ರಾಹ್ಮಣರ ಪ್ರಭುತ್ವ ನಾಶಮಾಡಿ’ ಎಂಬ ಬರಹದ ಫಲಕ ಹಿಡಿದುಕೊಂಡು ಸಭೆಯೊಂದರಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದ ಡೋರ್ಸಿ ಅವರು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆದಿಯಾಗಿ ಅನೇಕ ನಾಯಕರನ್ನು ಭೇಟಿ ಮಾಡಿದ್ದರು. ಈ ವೇಳೆ ಸಮಾಜದ ಹಲವು ವರ್ಗಗಳ ಕಾರ್ಯಕರ್ತರನ್ನು ಕೂಡ ಅವರು ಭೇಟಿ ಮಾಡಿದ್ದರು.

ಈ ವೇಳೆ ನಡೆದ ಸಭೆಯೊಂದರಲ್ಲಿ ಕೆಲವು ಜನರ ಜತೆ ಫೋಟೋ ತೆಗೆಸಿಕೊಂಡಿರುವ ಡೋರ್ಸಿ ಅವರ ಕೈಯಲ್ಲಿ ‘ಬ್ರಾಹ್ಮಣ ಪ್ರಭುತ್ವ ನಾಶ ಮಾಡಿ’ ಎಂದು ಬರೆಯಲಾಗಿದೆ. ಇದನ್ನು ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದರು.

ಈ ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಟ್ವಿಟರ್‌ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಡೋರ್ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಉದ್ಯಮಿ ಮೋಹನದಾಸ್‌ ಪೈ ಅವರು ಟ್ವೀಟ್‌ ಮಾಡಿ, ‘ಜಾಕ್‌ ಅವರ ನಿಲುವು ದ್ವೇಷಕ್ಕೆ ಪ್ರೇರಣೆ ನೀಡುತ್ತಿದೆ. ಅವರ ಮೇಲೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್‌ ರಾಠೋಡ್‌ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಟ್ವಿಟರ್, ‘ಸಭೆಗೆ ದಲಿತ ಕಾರ್ಯಕರ್ತರೊಬ್ಬರು ಬಂದು ಕೆಲವು ಸ್ವಂತ ಅನುಭವಗಳನ್ನು ಹಂಚಿಕೊಂಡರು. ಆಗ ಅವರು ಪೋಸ್ಟರ್‌ ಒಂದನ್ನು ಡೋರ್ಸಿ ಅವರಿಗೆ ನೀಡಿದರು. ಆಗ ಈ ಫೋಟೋವನ್ನು ತೆಗೆಯಲಾಗಿತ್ತು. ಫಲಕದಲ್ಲಿರುವ ಬರಹವು ಡೋರ್ಸಿ ಅವರ ನಿಲುವಲ್ಲ’ ಎಂದು ಹೇಳಿದೆ. ಅಲ್ಲದೆ, ‘ಸಮಾಜದ ಎಲ್ಲ ವರ್ಗಗಳ ಅನಿಸಿಕೆಗಳನ್ನು ಕೇಳಲು ಟ್ವಿಟರ್ ಬಯಸುತ್ತದೆ’ ಎಂದೂ ಅದು ಹೇಳಿಕೊಂಡಿದೆ.

ಆದರೆ ಟ್ವಿಟರ್ ಸ್ಪಷ್ಟೀಕರಣದಿಂದ ತೃಪ್ತರಾಗದ ಜನರು, ಈ ಸಾಮಾಜಿಕ ಮಾಧ್ಯಮದ ಸಿಇಒರನ್ನು ಹಿಗ್ಗಾಮುಗ್ಗಾ ಝಾಡಿಸುವುದನ್ನು ಮುಂದುವರಿದ್ದಾರೆ.

Follow Us:
Download App:
  • android
  • ios