ಕಾಂಗ್ರೆಸ್ ಜೆಡಿಎಸ್ ನಾಯಕರ ನಡುವೆ ಇದೀಗ ಬಹಿರಂಗವಾಗಿಯೇ ಅಸಮಾಧಾನ ಭುಗಿಲೇಳುತ್ತಿದೆ.
ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಕುಸ್ತಿಯ ತೀವ್ರತೆ ಕ್ರಮೇಣ ಹೆಚ್ಚಾಗತೊಡಗಿದ್ದು, ಉಭಯ ಪಕ್ಷಗಳ ಪ್ರಮುಖ ನಾಯಕರು ಇದೀಗ ಬಹಿರಂಗವಾಗಿಯೇ ಸರ್ಕಾರದ ನಿಲುವುಗಳ ಬಗ್ಗೆ ತಮ್ಮ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಪರಸ್ಪರ ಎಚ್ಚರಿಕೆಯ ಸಂದೇಶಗಳನ್ನು ರವಾನೆ ಮಾಡತೊಡಗಿದ್ದಾರೆ.
ಕಾಂಗ್ರೆಸ್ ನೇತಾರರು ರಾಜಕೀಯ ಕಾರ್ಯದರ್ಶಿ, ನಿಗಮ ಮಂಡಳಿ ನೇಮಕಾತಿಯಂತಹ ಪ್ರಮುಖ ತೀರ್ಮಾನಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡರು ಎಂಬಲ್ಲಿಂದ ಬಹಿರಂಗವಾಗಿ ಕಾಣಿಸತೊಡಗಿದ ಈ ದೋಸ್ತಿಯ ಬಿರುಕು ದಿನ ಕಳೆದಂತೆ ದೊಡ್ಡದಾಗತೊಡಗಿದೆ. ಸಾಮಾನ್ಯವಾಗಿ ಇಂತಹ ದೋಸ್ತಿ ಸಂಘರ್ಷದಿಂದ ದೂರವೇ ಉಳಿಯುತ್ತಿದ್ದ ಜೆಡಿಎಸ್‌ನ ಎಚ್. ಡಿ. ರೇವಣ್ಣ ಅವರು ಶುಕ್ರವಾರ ಪರೋಕ್ಷವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವುದು ಕಂದಕ ಹೆಚ್ಚುತ್ತಿರುವ ಸ್ಪಷ್ಟ ನಿದರ್ಶನವೆಂದೇರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
3 ರಾಜ್ಯಗಳಲ್ಲಿ ಪಕ್ಷವು ಗೆಲುವು ಕಂಡ ನಂತರ ರಾಜ್ಯ ಕಾಂಗ್ರೆಸ್‌ನ ತಲೆಯಾಳುಗಳ ಧೋರಣೆಯಲ್ಲಿ ಬದಲಾವಣೆಯಾಗಿದೆ ಎಂಬುದು ಜೆಡಿಎಸ್ ದೂರು. ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬ ಭಾವನೆ ಜೆಡಿಎಸ್ ನಲ್ಲಿತ್ತು. ಆದರೆ, ಇದನ್ನು ಲೆಕ್ಕಿಸದೇ ಕಾಂಗ್ರೆಸ್ ನೇತಾರರು ಪಟ್ಟು ಹಿಡಿದು ಈ ಪ್ರಕ್ರಿಯೆಗಳು ನಡೆಯುವಂತೆ ಮಾಡಿದ್ದಾರೆ. ತನ್ಮೂಲಕ ಭಿನ್ನಮತೀಯ ಚಟುವಟಿಕೆಗಳು ಹೆಚ್ಚಲು ಕಾರಣರಾಗಿದ್ದಾರೆ ಎಂಬ ದೂರುಗಳ ಪಟ್ಟಿಯನ್ನೇ ಜೆಡಿಎಸ್ ಹೊಂದಿದೆ.
ಆದರೆ, ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿ ನಡೆಯ ದಿದ್ದರೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿತ್ತು ಎಂಬುದು ಕಾಂಗ್ರೆಸ್ ವಾದ. ಆದರೆ, ಈ ನೆಪದಲ್ಲಿ ಆರಂಭಗೊಂಡ ವಾಗ್ವಾದ ಕ್ರಮೇಣ ಅಸಮಾಧಾ ನದ ಬಹಿರಂಗ ಪ್ರದರ್ಶನ ಆರಂಭಗೊಳ್ಳಲು ಕಾರಣವಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ಬದಲಾದ ಧೋರಣೆಯಿಂದ ಸಿಟ್ಟಾಗಿರುವ ಜೆಡಿಎಸ್ ಕ್ರಮೇಣ ತನ್ನ ದೋಸ್ತಿಯ ಹಸ್ತವನ್ನು ಬಿಜೆಪಿಯತ್ತ ಚಾಚಲಿದೆ ಎಂಬ ವದಂತಿಯೂ ಹರಡಿದೆ. ಇದು ರಾಜಕೀಯ ವಲಯದಲ್ಲಿ ತೀರಾ ಸಂಚಲನವನ್ನೂ ಮೂಡಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಯಾವುದೇ ಪರಿಣಾಮಕ್ಕೂ ತಾನು ಸಿದ್ಧ ಎಂಬ ಸಂದೇಶ ಕಾಂಗ್ರೆಸ್ ಕಡೆಯಿಂದಲೂ ಜೆಡಿಎಸ್‌ಗೆ ರವಾನೆಯಾಗತೊಡಗಿದಂತೆ ಕಾಣುತ್ತಿದೆ.
