ಏ.7ರಿಂದ ಸರಕು ಸಾಗಣೆ ವಾಹನಗಳ ಮುಷ್ಕರ

First Published 25, Mar 2018, 11:07 AM IST
Truckers Strike on April 7th
Highlights

ಸರಕು ಸಾಗಣೆ ವಾಹನಗಳ ಮುಷ್ಕರ

ಬೆಂಗಳೂರು(ಮಾ.25): ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ) ಏಕಪಕ್ಷೀಯವಾಗಿ ಸರಕು ಸಾಗಣೆ ವಾಹನಗಳಿಗೆ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತ ಏರಿಕೆ ಮಾಡಿರುವ ಕ್ರಮ ವಿರೋಧಿಸಿ ಅಖಿಲ ಭಾರತ ಸರಕು ಸಾಗಣೆ ಮಾಲೀಕರ ಸಂಘಗಳ ಒಕ್ಕೂಟ ಏಪ್ರಿಲ್ ೭ರ ಮಧ್ಯರಾತ್ರಿಯಿಂದ ದೇಶಾದ್ಯಂತ ಸರಕು ಸಾಗಣೆ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ಚೆನ್ನಾರೆಡ್ಡಿ, ಖಾಸಗಿ ಕಂಪನಿಗಳು ವಿಮಾ ಕ್ಷೇತ್ರ ಪ್ರವೇಶಿಸಿದ ಬಳಿಕ ಪ್ರತಿ ವರ್ಷ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತ ಹೆಚ್ಚಳವಾಗುತ್ತಿದೆ. ಇದೀಗ ಐಆರ್‌ಡಿಎ ಅನಗತ್ಯವಾಗಿ ಏಕಪಕ್ಷೀಯವಾಗಿ ಸರಕು ಸಾಗಣೆ ವಾಹನಗಳಿಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಥರ್ಡ್ ಪಾರ್ಟಿ ವಿಮೆ ಮೊತ್ತ ನಿಗದಿಗೊಳಿಸಿದೆ. ಈ ಪರಿಷ್ಕೃತ ದುಬಾರಿ ಮೊತ್ತ ಈ ಹಿಂದಿನ ವರ್ಷಗಳಿಗಿಂತ ನೂರಾರು ಪಟ್ಟು ಹೆಚ್ಚಳವಾಗಿದ್ದು, ಲಾರಿ ಮಾಲೀಕರಿಗೆ ಮಾರಕವಾಗಿದೆ ಎಂದರು.
ಏಕಾಏಕಿ ವಿಮೆ ಮೊತ್ತ ಹೆಚ್ಚಳ ಪ್ರಶ್ನಿಸಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಐಆರ್‌ಡಿಎ ಪ್ರತಿ ವರ್ಷ ಥರ್ಟ್ ಪಾರ್ಟಿ ವಿಮಾ ಪ್ರೀಮಿಯಂ ಮೊತ್ತ ಏರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

loader