ಹೈದರಾಬಾದ್(ಜು.28): ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿ ಕ್ಷಣಾರ್ಧದಲ್ಲಿ ಶತ್ರುಗಳು ಮಿತ್ರರಾಗಿಯೂ, ಮಿತ್ರರು ಶತ್ರುಗಳಾಗಿಯೂ ಬದಲಾಗಿ ಬಿಡುತ್ತಾರೆ. ಈ ವಾಧಕ್ಕೆ ಭಾರತದ ರಾಜಕಾರಣದಲ್ಲಿ ಅನೇಕ ಪುಷ್ಠಿ ಕಾಣಸಿಗುತ್ತವೆ. 

ಅದರಂತೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯನ್ನು ವಿರೋಧಿಸುತ್ತಿದ್ದ ತೆಲಂಗಾಂಣ ಸಿಎಂ ಕೆಸಿ ಚಂದ್ರಶೇಖರ್ ರಾವ್, ಇದೀಗ ಬಿಜೆಪಿಗೆ ಹತ್ತಿರವಾಗುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ಕೇಂದ್ರ ಸರ್ಕಾರದ ಆರ್’ಟಿಐ ತಿದ್ದುಪಡಿ ಮಸೂದೆಯ ವಿಷಯದಲ್ಲಿ ಕೆಸಿಆರ್ ನಡೆ  ಈ ಅನುಮಾನಕ್ಕೆ ಕಾರಣವಾಗಿದೆ. ತಿದ್ದುಪಡಿ ಮಸೂದೆಯನ್ನು ಪ್ರಾರಂಭದಲ್ಲಿ ವಿರೋಧಿಸುತ್ತಿದ್ದ ಕೆಸಿಆರ್ ಅವರ ಟಿಆರ್’ಎಸ್, ಇದೀಗ ರಾಜ್ಯಸಭೆಯಲ್ಲಿ ಎನ್’ಡಿಎ ಸರ್ಕಾರದ ಮಸೂದೆಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದೆ. 

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೊತೆ ಮಾತನಾಡಿದ ನಂತರ ಆರ್’ಟಿಐ ಕಾಯ್ದೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಮನವರಿಕೆ ಆಗಿದ್ದು, ಈ ಹಿನ್ನೆಲೆಯಲ್ಲಿ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಟಿಆರ್ ಎಸ್ ನಾಯಕ ಕೇಶವ ರಾವ್ ಹೇಳಿದ್ದಾರೆ. 

ಟಿಆರ್’ಎಸ್ ನಾಯಕರು ಮಸೂದೆಗೆ ಬೆಂಬಲಿಸಿರುವ ನಿರ್ಧಾರವನ್ನು ಬಿಜೆಪಿ-ಟಿಆರ್’ಎಸ್ ನಡುವೆ ಹೊಸ ದೋಸ್ತಿ ಶುರುವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.