ನವದೆಹಲಿ[ಫೆ.07]: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಋುತುಸ್ರಾವ ವಯೋಮಾನದ (10ರಿಂದ 50) ಮಹಿಳೆಯರಿಗೆ ಪ್ರವೇಶ ನೀಡುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಗಳು ವಿಚಾರಣೆಗೆ ಅರ್ಹವೇ ಅಲ್ಲವೇ ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ಇದೇ ವೇಳೆ, ಈವರೆಗೆ ಋುತುಸ್ರಾವ ಮಹಿಳೆಯರ ಪ್ರವೇಶ ವಿರೋಧಿಸುತ್ತಿದ್ದ ಕೇರಳ ಸರ್ಕಾರದ ಅಧೀನದ ತಿರುವಾಂಕೂರು ದೇವಸ್ವಂ ಮಂಡಳಿ ತನ್ನ ನಿಲುವನ್ನು ಹಠಾತ್ತನೇ ಬದಲಿಸಿದ್ದು, ಈ ವರ್ಗದ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ತನ್ನ ಆಡ್ಡಿಯಿಲ್ಲ ಎಂದು ಹೇಳಿದೆ. ಇದರಿಂದ ಮಹಿಳಾ ಪ್ರವೇಶ ವಿರೋಧಿ ಹೋರಾಟಕ್ಕೆ ಹಿನ್ನಡೆಯಾಗಿದೆ.

ಟಿಡಿಬಿ ನಿಲುವು ಬದಲು:

ಈ ಹಿಂದೆ ಮಹಿಳಾ ಪ್ರವೇಶ ಆದೇಶಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ತಿರುವಾಂಕೂರು ದೇವಸ್ವಂ ಸಮಿತಿ (ಟಿಡಿಬಿ) ಋುತುಸ್ರಾವ ವಯೋಮಾನದ ಮಹಿಳೆಯರ ಪ್ರವೇಶವನ್ನು ವಿರೋಧಿಸಿತ್ತು. ಆದರೆ ಬುಧವಾರದ ವಿಚಾರಣೆ ವೇಳೆ ತನ್ನ ನಿಲುವನ್ನು ಹಠಾತ್ತನೇ ಬದಲಿಸಿದ ಟಿಡಿಬಿ, ‘ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಒಪ್ಪಲೇಬೇಕು. ಲಿಂಗಾಧರಿತವಾಗಿ ತಾರತಮ್ಯ ಮಾಡುವ ಪದ್ಧತಿಗೆ ಮಂಗಳ ಹಾಡಲು ಇದು ಅತ್ಯಂತ ಸೂಕ್ತ ಸಮಯ’ ಎಂದಿತು.

ಈ ವಾದಕ್ಕೆ ಸಹಮತ ವ್ಯಕ್ತಪಡಿಸಿದ ಕೇರಳ ಸರ್ಕಾರದ ವಕೀಲರು, ‘ಮರುಪರಿಶೀಲನಾ ಅರ್ಜಿಗಳು ಕೆಲವು ವಿಷಯಗಳ ಬಗ್ಗೆ ಆಕ್ಷೇಪ ಎತ್ತಿವೆ. ಆದರೆ ಕೇರಳ ಸರ್ಕಾರದ ಕಾಯ್ದೆಯ ಪರಿಚ್ಛೇದ 25, 26 (2) ಹಾಗೂ ನಿಯಮ 3ರ ಬಗ್ಗೆ ಯಾವುದೇ ಆಕ್ಷೇಪಗಳು ಅರ್ಜಿಯಲ್ಲಿ ವ್ಯಕ್ತವಾಗಿಲ್ಲ. ಹೀಗಾಗಿ ಸಮಾನತೆ ಸಾರಿರುವ ಸುಪ್ರೀಂ ಕೋರ್ಟ್‌ ಆದೇಶ ಮರುಪರಿಶೀಲನೆ ಕೋರಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿತು.

ಆದರೆ ಮರುಪರಿಶೀಲನೆ ಕೋರಿರುವ ನಾಯರ್‌ ಸೇವಾ ಸಮಾಜದ ವಕೀಲ ಕೆ. ಪರಾಶರನ್‌ ಅವರು ವಾದ ಮಂಡಿಸಿ, ‘ಶಬರಿಮಲೆ ಅಯ್ಯಪ್ಪನು ಬ್ರಹ್ಮಚಾರಿ. ಹೀಗಾಗಿ ಈ ಆಧಾರದಲ್ಲಿ 10ರಿಂದ 50 ವರ್ಷದ ವಯೋಮಾನದ ಮಹಿಳೆಯರಿಗೆ ನಿರ್ಬಂಧ ಹೇರಲಾಗಿತ್ತು. ಇದಲ್ಲದೆ ಸಂವಿಧಾನದ 15ನೇ ಪರಿಚ್ಛೇದವು ಜಾತ್ಯತೀತ ಸಂಸ್ಥೆಗಳಿಗೆ ಎಲ್ಲರೂ ಮುಕ್ತ ಪ್ರವೇಶ ಮಾಡಲು ಅವಕಾಶ ನೀಡುತ್ತದೆ. ಆದರೆ ಧಾರ್ಮಿಕ ಸಂಸ್ಥೆಗಳ ಪ್ರವೇಶಕ್ಕೆ ಇದು ಅನ್ವಯವಾಗದು’ ಎಂದರು.