ಹುಬ್ಬಳ್ಳಿ :  ಶ್ರೀರಂಗಪಟ್ಟಣ ರೈಲ್ವೆ ಸೇತುವೆ ಮೇಲೆ ಕಿಡಿಗೇಡಿಯೊಬ್ಬ ಅಲರಾಂ ಚೈನ್‌ ಎಳೆದಿದ್ದರಿಂದ ರೈಲೊಂದು ನಿಂತ ಘಟನೆ ನಡೆದಿದೆ. ಆದರೆ ರೈಲಿನ ಗಾರ್ಡ್‌ ಎನ್‌.ವಿಷ್ಣುಮೂರ್ತಿ ಎಂಬುವರು ಜೀವದ ಹಂಗು ತೊರೆದು ಈ ಅಪಾಯಕಾರಿ ಸೇತುವೆ ಮೇಲೆ ನಡೆದೇ ಹೋಗಿ ಬೋಗಿಗಳ ನಡುವೆ ಸಿಲುಕಿದ್ದ ಅಲರಾಂ ಚೈನನ್ನು ನಾಜೂಕಾಗಿ ಬಿಡಿಸಿದ್ದಾರೆ. 

ಅತ್ಯಂತ ಕ್ಲಿಷ್ಟಕರ ಹಾಗೂ ಜೀವಕ್ಕೆ ಎರವಾಗುವ ಸಾಧ್ಯತೆ ಇದ್ದ ಗಾರ್ಡ್‌ ಅವರ ‘ಸಾಹಸ’ವನ್ನು ಪ್ರಯಾಣಿಕರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಷ್ಣುಮೂರ್ತಿ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ರೈಲ್ವೆ ಇಲಾಖೆ ಕೂಡ ಅವರನ್ನು ಸನ್ಮಾನಿಸಿದೆ. ಡಿ.26ರಂದು ಚಾಮರಾಜನಗರ- ತಿರುಪತಿ ರೈಲು ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಸಾಹಸ ಮೆರೆದ ವಿಷ್ಣುಮೂರ್ತಿ ಅವರಿಗೆ 5000 ರು. ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಗಿದೆ. ಚೈನು ಎಳೆದವನನ್ನು ಬಂಧಿಸಲಾಗಿದೆ.

ಆಗಿದ್ದೇನು?:  ಈ ಘಟನೆ ನಡೆದಿದ್ದು ಕಳೆದ ಡಿಸೆಂಬರ್‌ 26ರಂದು. ಅಂದು ಯಾರೋ ರೈಲಿನ ಅಲರಾಂ ಚೈನನ್ನು ಎಳೆದ ಪರಿಣಾಮ ಚಾಮರಾಜ ನಗರ-ತಿರುಪತಿ ರೈಲು (ಸಂಖ್ಯೆ 16219) ಶ್ರೀರಂಗಪಟ್ಟಣ ಮೇಲ್ಸೇತುವೆ ಮೇಲೆ ನಿಂತುಬಿಟ್ಟಿದೆ.

ಅಲರಾಂ ಚೈನನ್ನು ಯಾರಾದರೂ ಎಳೆದರೆ ಚೈನು ಬೋಗಿಗಳ ಮಧ್ಯೆ ಸಿಲುಕಿ ರೈಲು ನಿಲ್ಲುತ್ತದೆ. ಆಗ ಅದನ್ನು ರೈಲು ಸಿಬ್ಬಂದಿ ಬಿಡಿಸುವುದು ವಾಡಿಕೆ. ಆದರೆ ರೈಲು ಈ ಅಪಾಯಕಾರಿ ಬ್ರಿಜ್‌ ಮೇಲೆ ನಿಂತಿದ್ದರಿಂದ ಅದನ್ನು ಬಿಡಿಸುವುದು ಹೇಗೆ ಎಂಬ ಚಿಂತೆ ರೈಲು ಸಿಬ್ಬಂದಿಗೆ ಎದುರಾಗಿದೆ. ಆದಾಗ್ಯೂ ಇದನ್ನು ಲೆಕ್ಕಿಸದ ರೈಲಿನ ಗಾರ್ಡ್‌ ವಿಷ್ಣುಮೂರ್ತಿ ಅವರು, ಆಪದ್ಬಾಂಧವನಂತೆ ಜೀವದ ಹಂಗನ್ನು ತೊರೆದು ಸೇತುವೆ ಮೇಲೆ ನಡೆದುಕೊಂಡು ಹೋಗಿ ಬೋಗಿಗೆ ಸಿಲುಕಿದ್ದ ಚೈನ್‌ ಬಿಡಿಸಿದ್ದಾರೆ. ಕೇವಲ 10 ನಿಮಿಷದಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದಾರೆ.

ಬಳಿಕ ಚೈನು ಎಳೆದವರು ಯಾರೆಂದು ವಿಚಾರಿಸಿದಾಗ ವಿನಾಕಾರಣ ಕಿಡಿಗೇಡಿಯೊಬ್ಬ ಈ ಕೃತ್ಯ ಎಸಗಿದ್ದು ಪತ್ತೆಯಾಗಿದೆ. ಆಗ ಆ ಪುಂಡನನ್ನು ಬಂಧಿಸಿ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಪ್ರಶಂಸೆ, ಸನ್ಮಾನ:  ವಿಷ್ಣುಮೂರ್ತಿ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ರೈಲ್ವೆ ಇಲಾಖೆ ಕೂಡ ಗುರುತಿಸಿದೆ. ಹುಬ್ಬಳ್ಳಿ ರೈಲ್‌ ಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನೈಋುತ್ಯ ರೈಲ್ವೆ ವಲಯದ ಮಹಾಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಅವರು ವಿಷ್ಣುಮೂರ್ತಿ ಅವರಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ಪ್ರದಾನ ಮಾಡಿದರು.

ಕಾನ್‌ಸ್ಟೇಬಲ್‌ ಆಗಿದ್ದ ಮೂರ್ತಿ!:  ವಿಷ್ಣುಮೂರ್ತಿ 1988ರಲ್ಲಿ ಈಶಾನ್ಯ ಗಡಿ ರೈಲ್ವೆ ಲೋಡಿಂಗ್‌ ವಿಭಾಗದಲ್ಲಿ ಆರ್‌ಪಿಎಫ್‌ ಕಾನಸ್ಟೇಬಲ್‌ ಆಗಿ ಸೇರಿದ್ದರು. 1998ರಲ್ಲಿ ತಮಿಳುನಾಡಿನ ತಿರುಚನಾಪಳ್ಳಿಯ 5ನೆಯ ಬಟಾಲಿಯನ್‌ಗೆ ಹೆಡ್‌ಕಾನಸ್ಟೇಬಲ್‌ ಆಗಿ ಬಡ್ತಿ ಹೊಂದಿ, 2004ರಲ್ಲಿ ನೈಋುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಲ್ಲಿ ಹಿರಿಯ ವಾಣಿಜ್ಯ ಗುಮಾಸ್ತರಾದರು. 2010ರಿಂದ ಬೆಂಗಳೂರು ವಿಭಾಗದ ಹಿರಿಯ ಪ್ರಯಾಣಿಕ ರೈಲ್ವೆ ಗಾರ್ಡ್‌ ಆಗಿ ಪದೋನ್ನತಿ ಹೊಂದಿದರುಎಂದು ನೈಋುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.