ಚಾಲಕ ಇನ್ನು ರೈಲಿಗೆ ಹತ್ತಿಲ್ಲ, ಅಷ್ಟರಲ್ಲೇ ರೈಲು ತನ್ನಷ್ಟಕ್ಕೆ ಚಲಿಸಿ ಬಿಟ್ಟಿದೆ. ಇಷ್ಟೇ ಅಲ್ಲ ಬರೋಬ್ಬರಿ 90 ಕೀಮಿ ಚಾಲಕನಿಲ್ಲದೇ ರೈಲು ಚಲಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ಕೊನೆಗೆ ರೈಲು ನಿಯಂತ್ರಣಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ
ಸಿಡ್ನಿ(ನ.08): 268 ಬೋಗಿಗಳಲ್ಲಿ ಕಬ್ಬಿಣದ ಅದಿರು ತುಂಬಿದ್ದ ಬೃಹತ್ ಸರಕು ಸಾಗಣೆ ರೈಲೊಂದು, ಚಾಲಕನಿಲ್ಲದೇ ಒಂದು ಗಂಟೆಯಲ್ಲಿ 90 ಕಿ.ಮೀ. ಚಲಿಸಿದ ಘಟನೆ ಆಸ್ಪ್ರೇಲಿಯಾದಲ್ಲಿ ನಡೆದಿದ್ದು, ಕೊನೆಗೆ ರೈಲನ್ನು ಹಳಿತಪ್ಪಿಸಿ ಅನಾಹುತವನ್ನು ತಪ್ಪಿಸಲಾಗಿದೆ.
ಬಿಎಚ್‌ಪಿ ಎಂಬ ಗಣಿ ಕಂಪನಿಗೆ ಸೇರಿದ ರೈಲಿನ ಚಾಲಕ, ರೈಲಿನಿಂದ ಇಳಿದು ಚಾಲಕ ತಪಾಸಣೆಗೆ ನಡೆಸುತ್ತಿದ್ದ ವೇಳೆ, ರೈಲು ಏಕಾಏಕಿ ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸಲು ಆರಂಭಿಸಿದೆ. ಈ ವೇಳೆ ಚಾಲಕ ಮರಳಿ ರೈಲು ಏರುವ ಪ್ರಯತ್ನ ಮಾಡಿದ್ದನಾದರೂ ಅದು ಫಲ ಕೊಟ್ಟಿಲ್ಲ. ಕೊನೆಗೆ ಆತ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟರ ವೇಳೆಗಾಗಲೇ ರೈಲು ಸಾಕಷ್ಟುದೂರ ಚಲಿಸಿತ್ತು. ರೈಲನ್ನು ಹಾಗೆಯೇ ಬಿಟ್ಟಿದ್ದರೆ ಅದು ಮುಂದೆ ಪೋರ್ಟ್ ಹೆಡ್‌ಲ್ಯಾಂಡ್‌ಗೆ ನುಗ್ಗಿ ಅನಾಹುತು ಮಾಡುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೋರ್ಟ್ ಹೆಡ್‌ಲ್ಯಾಂಡ್‌ಗೆ ಪ್ರವೇಶಕ್ಕೂ ಮುನ್ನವೇ ಅದನ್ನು ಉದ್ದೇಶಪೂರ್ವಕವಾಗಿ ಹಳಿ ತಪ್ಪುವಂತೆ ಮಾಡಿದ್ದಾರೆ. ಹೀಗಾಗಿ ರೈಲು ಮುಂದೆ ಸಾಗುವ ಬದಲು ಹಳಿ ತಪ್ಪಿ ಪಕ್ಕಕ್ಕೆ ಉರುಳಿದೆ. ಪರಿಣಾಮ ಸುಮಾರು 1.5 ಕಿ.ಮೀ. ಉದ್ದದ ರೈಲು ಮಾರ್ಗಕ್ಕೆ ಹಾನಿ ಸಂಭವಿಸಿದೆ. ಆದರೆ, ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ರೈಲು ಬೋಗಿಗಳು ನುಜ್ಜುಗುಜ್ಜಾಗಿ ಮಾರ್ಗದ ಉದ್ದಕ್ಕೂ ರಾಶಿ ಬಿದ್ದಿರುವ ಕಬ್ಬಿಣದ ಅದಿರನ್ನು ತೆರವುಗೊಳಿಸಲು 130 ಸಿಬ್ಬಂದಿ ನಿಯೋಜಿಸಲಾಗಿದೆ. ಮಾರ್ಗವನ್ನು ಮತ್ತೆ ಸಂಚಾರ ಮುಕ್ತಗೊಳಿಸಲು ಸುಮಾರು ಒಂದು ವಾರ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಚಾಲಕನಿಲ್ಲದೇ ರೈಲು ಚಲಿಸಿದ್ದು ಹೇಗೆ ಎಂಬುದರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಆಸ್ಪ್ರೇಲಿಯಾದ ಸಾರಿಗೆ ಸುರಕ್ಷತೆ ಇಲಾಖೆ ತಿಳಿಸಿದೆ.
