ಮುಂಬೈ(ಅ.22): ರಿಲಯನ್ಸ್‌ ಜಿಯೋಗೆ ಸಮರ್ಪಕ ಇಂಟರ್‌ಕನೆಕ್ಟಿವಿಟಿ ನೀಡದ ಏರ್‌ಟೆಲ್‌, ಐಡಿಯಾ ಮತ್ತು ವೊಡಾಫೋನ್‌ ಕಂಪನಿಗಳಿಗೆ ರೂ.3000 ಕೋಟಿ ದಂಡ ವಿಧಿಸುವಂತೆ ದೂರಸಂಪರ್ಕ ಇಲಾಖೆಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಶಿಫಾರಸು ಮಾಡಿದೆ.


ಟ್ರಾಯ್‌ ಪ್ರಕಾರ, ಏರ್‌ಟೆಲ್‌ ಮತ್ತು ವೊಡಾಫೋನ್‌ ತಲಾ 1050 ಕೋಟಿ ಮತ್ತು ಐಡಿಯಾ ಸೆಲ್ಯುಲರ್‌ 900 ಕೋಟಿ ರುಪಾಯಿ ದಂಡ ತೆರಬೇಕಿದೆ. ಈ ಮೂರು ಕಂಪನಿಗಳು ರಿಲಯನ್ಸ್‌ ಜಿಯೋಗೆ ಅಂತರ ಸಂಪರ್ಕ ನೀಡುವ ವಿಚಾರದಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ದಂಡ ವಿಧಿಸಲು ಶಿಫಾರಸು ಮಾಡಲಾಗಿದೆ. 


ಏರ್‌ಟೆಲ್‌, ವೊಡಾಫೋನ್‌ ಮತ್ತು ಐಡಿಯಾ ಸೆಲ್ಯುಲರ್‌ ಕಂಪನಿಗಳು ತಮಗೆ ಅಂತರ ಸಂಪರ್ಕ ನೀಡದೇ ತೊಂದರೆ ನೀಡುತ್ತಿವೆ ಎಂದು ರಿಲಯನ್ಸ್‌ ಜಿಯೋ ಟ್ರಾಯ್‌ಗೆ ದೂರು ನೀಡಿತ್ತು. ಅಂತರ ಸಂಪರ್ಕ ಕೊರತೆಯಿಂದಾಗಿ ತಮ್ಮ ಗ್ರಾಹಕರು ತೀವ್ರತೊಂದರೆಗೀಡಾ​ಗುತ್ತಿದ್ದಾರೆ ಎಂದು ಜಿಯೋ ದೂರಿತ್ತು. ಪಾಂಯಿಂಟ್‌ ಆಫ್‌ ಇಂಟರ್‌ ಕನೆಕ್ಷನ್‌ ಭೌತಿಕವಾಗಿ ಎರಡು ನೆಟ್‌ವರ್ಕ್ಗಳ ನಡುವೆ ಸಂಪರ್ಕ ಕಲ್ಪಿಸುವ ಸ್ಥಳ. ಒಂದು ಮೊಬೈಲ್‌ ಕಂಪನಿಯ ಗ್ರಾಹಕರು ಮತ್ತೊಂದು ಮೊಬೈಲ್‌ ಕಂಪನಿಯ ಗ್ರಾಹಕರಿಗೆ ಕರೆ ಮಾಡಬೇಕಾದ ಅಗತ್ಯಪ್ರಮಾಣದಲ್ಲಿ ಇಂಟರ್‌ ಕನೆಕ್ಷನ್‌ ಪಾಯಿಂಟ್‌ಗಳಿರಬೇಕು. ಆದರೆ, ತಮ್ಮ ಕಂಪನಿ ಸೇವೆ ಆರಂಭಿಸಿದ ನಂತರ ಐಡಿಯಾ, ಏರ್‌ಟೆಲ್‌ ಮತ್ತು ವೊಡಾಪೋನ್‌ಗಳು ಅಗತ್ಯಪ್ರಮಾಣದಲ್ಲಿ ಇಂಟರ್‌ ಕನೆಕ್ಷನ್‌ ಪಾಯಿಂಟ್‌ಗಳನ್ನು ನೀಡುತ್ತಿಲ್ಲ ಎಂದು ಜಿಯೋ ದೂರು ನೀಡಿತ್ತು.


10 ಕೋಟಿ ಗ್ರಾಹಕರಿಗೆ ಸೇವೆ ಒದಗಿಸುವ ಗುರಿ ಹೊಂದಿರುವ ತನಗೆ ಇತರ ಕಂಪನಿಗಳು ಅಗತ್ಯ ಇಂಟರ್‌ ಕನೆಕ್ಷನ್‌ ಪಾಯಿಂಟ್‌ ನೀಡುತ್ತಿಲ್ಲ ಎಂದು ಎಂಬುದು ಜಿಯೋ ದೂರು. ಇಂಟರ್‌ಕನೆಕ್ಟಿವಿಟಿ ಪಾಯಿಂಟ್‌ ಹೆಚ್ಚಿಸುವ ಬದಲಿಗೆ ಹಾಲಿ ಇರುವುವನ್ನೇ ಸ್ಥಗಿತಗೊಳಿಸಿ ನಮಗೆ ಅಡಚಣೆ ಮಾಡುತ್ತಿದ್ದಾರೆ ಎಂದು ಜಿಯೋ ದೂರಸಂಪರ್ಕ ಇಲಾಖೆಗೂ ದೂರುನೀಡಿತ್ತು.
ಈ ವಿವಾದ ಪ್ರಧಾನಿ ಕಾರ್ಯಾಲಯಕ್ಕೂ ತಲುಪಿತ್ತು. ಜಿಯೋ ಪ್ರಧಾನಿ ಕಾರ್ಯಲಯಕ್ಕೂ ದೂರು ನೀಡಿತ್ತು. ಈ ದೂರನ್ನು ಪರಿಶೀಲಿಸುವಂತೆ ಟ್ರಾಯ್‌ಗೆ ಸೂಚಿಸಲಾಗಿತ್ತು.