ನವದೆಹಲಿ: ಟೆಲಿಫೋನ್ ಆಪರೇಟರ್‌ಗಳನ್ನು ಬದಲಿಸಿದಂತೆ ಕೇಬಲ್ ಟೀವಿ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನೂ ಬದಲಿಸಬೇಕೇ? ಈ ವರ್ಷಾಂತ್ಯದೊಳಗೆ ಅಂತಹ ದ್ದೊಂದು ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಭರವಸೆ ನೀಡಿದೆ.

ಕೇಬಲ್ ಟೀವಿ ಹಾಗೂ ಡಿಟಿಎಚ್ ದರಗಳನ್ನು ಕಡಿಮೆ ಮಾಡಲು ಫೆ.1 ರಿಂದ ಹೊಸ ನೀತಿ ಜಾರಿಗೆ ತರುತ್ತಿರುವ ಟ್ರಾಯ್, ಇದೀಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಸೆಟ್‌ಟಾಪ್ ಬಾಕ್ಸ್ ಪೋರ್ಟೆಬಿಲಿಟಿ ಸೇವೆ ಜಾರಿಗೊಳಿಸಲು ಮುಂದಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಈ ವರ್ಷಾಂತ್ಯದೊಳಗೆ ಪೋರ್ಟೆಬಿಲಿಟಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಟ್ರಾಯ್ ಅಧ್ಯಕ್ಷ  ಎಆರ್‌ಎಸ್ ಶರ್ಮಾ ಹೇಳಿದ್ದಾರೆ.
ಸದ್ಯ ಕೇಬಲ್ ಟೀವಿ ಹಾಗೂ ಡಿಟಿಎಚ್ ಗ್ರಾಹಕರು ಯಾವ ಕೇಬಲ್ ಟೀವಿ ಆಪರೇಟರ್ ಹಾಗೂ ಡಿಟಿಎಚ್ ಸೇವೆ ಪೂರೈಕೆದಾರರಿಂದ ಸೇವೆ ಪಡೆಯುತ್ತಿದ್ದಾರೋ ಅವರಿಂದಲೇ ಸೆಟ್ ಟಾಪ್ ಬಾಕ್ಸ್ ಖರೀದಿಸಿರುತ್ತಾರೆ. 

ಆ ಸೆಟ್‌ಟಾಪ್ ಬಾಕ್ಸ್‌ಗಳಲ್ಲಿ ಮೊದಲೇ ಲೋಡ್ ಮಾಡಲಾದ ಸಾಫ್ಟ್‌ವೇರ್ ಇರುತ್ತದೆ.  ಹೀಗಾಗಿ ಕೇಬಲ್ ಅಥವಾ ಡಿಟಿಎಚ್ ಸಂಪರ್ಕ ಪಡೆದ ನಂತರ ಗ್ರಾಹಕರಿಗೆ ಆ ಕಂಪನಿಯ ಸೇವೆ ಇಷ್ಟವಾಗದೆ ಮತ್ತೊಂದು ಕೇಬಲ್ ಟೀವಿ ಆಪರೇಟರ್ ಅಥವಾ ಡಿಟಿಎಚ್ ಕಂಪನಿಗೆ ಹೋಗಬೇಕು ಅನ್ನಿಸಿದರೆ ಸಾವಿರಾರು ರು. ತೆತ್ತು ಸೆಟ್ ಟಾಪ್ ಬಾಕ್ಸ್ ಬದಲಿಸಬೇಕಾಗುತ್ತದೆ. ಇದನ್ನು ತಪ್ಪಿಸುವುದು ಸೆಟ್‌ಟಾಪ್ ಬಾಕ್ಸ್ ಪೋರ್ಟೆಬಿಲಿಟಿ ಸೇವೆಯ ಉದ್ದೇಶ. 

ಜಾರಿಗೆ ಬಂದ ನಂತರ ಗ್ರಾಹಕರು ತಮ್ಮಲ್ಲಿರುವ ಹಳೆಯ ಸೆಟ್‌ಟಾಪ್ ಬಾಕ್ಸನ್ನೇ ಇಟ್ಟುಕೊಂಡು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಕೇಬಲ್ ಟೀವಿ ಅಥವಾ ಡಿಟಿಎಚ್ ಸೇವೆ ಪೂರೈಕೆದಾರರನ್ನು ಬದಲಿಸಬಹುದು ಎಂಬುದು ಟ್ರಾಯ್‌ನ ಹೇಳಿಕೆ. ಆದರೆ, ಕೇಬಲ್ ಟೀವಿ ಹಾಗೂ ಡಿಟಿಎಚ್ ಪೂರೈಕೆದಾರರು ಇದು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. 

ಏಕೆಂದರೆ ತಾವು ಬೇರೆ ಬೇರೆ ಕಂಪನಿಗಳ ಸೆಟ್ ಟಾಪ್ ಬಾಕ್ಸ್‌ಗಳನ್ನು ಬಳಸುತ್ತಿದ್ದು, ಅವುಗಳಲ್ಲಿ ಲೋಡ್ ಆಗಿರುವ ಸಾಫ್ಟ್‌ವೇರನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಅವರ ಸಮರ್ಥನೆ. ಆದರೆ, ಬೇಕಾದಾಗ ಸಾಫ್ಟ್‌ವೇರ್ ಬದಲಿಸಬಹುದಾದ ಹೊಸ ಮಾದರಿಯ ಸೆಟ್‌ಟಾಪ್ ಬಾಕ್ಸ್‌ಗಳನ್ನು ತಾನು ಶೋಧಿಸುತ್ತಿರುವುದಾಗಿ ಟ್ರಾಯ್ ಹೇಳಿಕೊಂಡಿದೆ. ಒಂದು ವೇಳೆ ಟ್ರಾಯ್ ಹೊಸ ಮಾದರಿಯ ಸೆಟ್‌ಟಾಪ್ ಬಾಕ್ಸ್‌ಗಳನ್ನು ಪರಿಚಯಿಸಿ ದರೂ ಈಗಾಗಲೇ ಜನರ ಬಳಿಯಿರುವ ಹಳೆಯ ಸೆಟ್ ಟಾಪ್ ಬಾಕ್ಸ್‌ಗಳು ಪೋರ್ಟೆಬಿಲಿಟಿಗೆ ಹೇಗೆ ಹೊಂದಿಕೊಳ್ಳುತ್ತವೆ? ನಿರ್ದಿಷ್ಟ ಪ್ರದೇಶಗಳಲ್ಲಿ ಸೇವೆ ನೀಡುವ ಕೇಬಲ್ ಆಪರೇಟರ್‌ಗಳನ್ನು ಬದಲಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರೆತಿಲ್ಲ.