ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ  ಫೆ.1 ರಿಂದ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ.

ಬೆಂಗಳೂರು : ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜಾರಿಗೊಳಿಸುತ್ತಿರುವ ಗ್ರಾಹಕರೇ ತಮಗೆ ಬೇಕಾದ ಚಾನೆಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ಫೆ.1 ರಿಂದ ಜಾರಿಗೆ ಬರಲಿದೆ. ಅಂದಿನಿಂದಲೇ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ.

ಆದರೆ, ಹೊಸ ವ್ಯವಸ್ಥೆ ಅಳವಡಿಕೆಗೆ ಗ್ರಾಹಕರಿಗೆ ಏಳು ದಿನ ಕಾಲಾವಕಾಶ ನೀಡಲಾಗಿರುವುದರಿಂದ ಫೆ.7 ವರೆಗೆ ಉಚಿತವಾಗಿ ಪ್ರಸಾರವಾಗುವ ಚಾನೆಲ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಆಗಲೂ ಯಾವುದೇ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳದೇ ಗ್ರಾಹಕರು ಸುಮ್ಮನಿದ್ದರೆ ಸಂಪೂರ್ಣ ಕೇಬಲ್‌ ಟೀವಿ ಕಡಿತವಾಗಲಿದೆ.

‘ಟ್ರಾಯ್‌ ಹೊಸ ನೀತಿ ಜಾರಿಗೆ ಕೇಬಲ್‌ ಆಪರೇಟರ್‌ಗೆ ಸ್ಯಾಟಲೈಟ್‌ನಿಂದ ಸಿಗ್ನಲ್ಸ್‌ ಒದಗಿಸಿ ಕೊಡುವ ಮಲ್ಟಿಸಿಸ್ಟಂ ಆಪರೇಟರ್‌ಗಳು (ಎಂಎಸ್‌ಓ) ಮತ್ತು ಕೇಬಲ್‌ ಟಿವಿ ಆಪರೇಟರ್‌ಗಳ ನಡುವೆ ಆದಾಯ ಹಂಚಿಕೆ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು. ಈ ಬಗ್ಗೆ ಟ್ರಾಯ್‌ ನೀತಿಯಲ್ಲಿಯೂ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಈವರೆಗೆ ಎಂಎಸ್‌ಓಗಳು ಈ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಂಡಿಲ್ಲ. ರಾಜ್ಯದಲ್ಲಿ ಯಾವುದೇ ಒಬ್ಬ ಆಪರೇಟರ್‌ನೊಂದಿಗೆ ಒಪ್ಪಂದವಾಗಿಲ್ಲ’ ಎಂದು ರಾಜ್ಯ ಕೇಬಲ್‌ ಟಿವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

‘ಇದರಿಂದ ಟಿವಿ ವೀಕ್ಷಕರಿಗೆ ಯಾವುದೇ ಸಮಸ್ಯೆ ಇಲ್ಲ. ಫೆ.1 ರಿಂದ ಶುಲ್ಕ ಪಾವತಿ ಮಾಡಿ ವೀಕ್ಷಣೆ ಮಾಡುವ ಚಾನೆಲ್‌ಗಳನ್ನು ಕಡಿತಗೊಳ್ಳಲಿದ್ದು, ಉಚಿತವಾಗಿ ಪ್ರಸಾರವಾಗುವ ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಫೆ.7 ರೊಳಗೆ ಹೊಸ ವ್ಯವಸ್ಥೆ ಅಳವಡಿಕೆ ಮಾಡಿಕೊಳ್ಳಬೇಕು. ಆಗ ಶುಲ್ಕ ಪಾವತಿ ಚಾನೆಲ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ’ ಎಂದು ತಿಳಿಸಿದರು.

‘ಇನ್ನು ಸಂಪೂರ್ಣವಾಗಿ ಕೇಬಲ್‌ ಆಪರೇಟಿಂಗ್‌ ಸಿಸ್ಟಂ ಬಂದ್‌ ಮಾಡುವ ಕುರಿತು ರಾಷ್ಟ್ರಮಟ್ಟದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಕೇಬಲ್‌ ಬಂದ್‌ಗೆ ಕೋಲ್ಕತ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹಾಗಾಗಿ, ಗುರುವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು.