ಭಾರೀ ಮಳೆಯಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಟ್ರಾಫಿಕ್ ಪೇದೆ| ಮಳೆಯಲ್ಲೇ ಸುಗಮ ಸಂಚಾರದ ಜವಾಬ್ದಾರಿ ಹೊತ್ತ ಪೇದೆ| ಅಸ್ಸಾಂ ರಾಜಧಾನಿ ಗುವಹಾಟಿ ಟ್ರಾಫಿಕ್ ಪೇದೆ ಮಿಥುನ್ ದಾಸ್| ಮಳೆಗೆ ಎದೆಯೊಡ್ಡಿ ನಿಂತಿರುವ ಮಿಥುನ್ ದಾಸ್ ವಿಡಿಯೋ ವೈರಲ್| ಅಸ್ಸಾಂ ಪೊಲೀಸರ ಗರ್ವ ಹೆಚ್ಚಿಸಿದ ಮಿಥುನ್ ದಾಸ್ ಕರ್ತವ್ಯಪ್ರಜ್ಞೆ|
ಗುವಹಾಟಿ(ಏ.01): ಕರ್ಮಣ್ಯೇವಾಧಿಕಾರಸ್ಥೆ ಮಾ ಫಲೇಷು ಕದಾಚನ...ಗೀತೆಯ ಈ ಸಾರ ಅರ್ಥವಾದವ ಕರ್ತವ್ಯದಲ್ಲಿರುತ್ತಾನೆ. ಅರ್ಥವಾಗದವನಿಗೆ ಆತ ಆದರ್ಶನಾಗಿರುತ್ತಾನೆ.
ಕಾಯಕವೇ ಕೈಲಾಸ ಎಂದರೇನು ಬಲ್ಲವನಿಗೆ ಮಾತ್ರ ಕರ್ತವ್ಯದ ಅರಿವಿರುತ್ತದೆ. ಇದು ಸಮಾಜದ ಪ್ರತಿಯೊಬ್ಬರಿಗೂ ಅನ್ವಯಿಸುವ ಗುಣ. ಇದರಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವವರು ಸೈನಿಕರು ಮತ್ತು ಪೊಲೀಸರು.
ಅದರಂತೆ ಅಸ್ಸಾಂ ರಾಜಧಾನಿ ಗುವಹಾಟಿಯಲ್ಲಿ ಭಾರೀ ಮಳೆಯ ನಡುವೆಯೂ ತನ್ನ ಕರ್ತವ್ಯ ನಿರ್ವಹಿಸುವ ಮೂಲಕ, ಟ್ರಾಫಿಕ್ ಪೇದೆಯೋರ್ವ ಮತ್ತೆ ಅದೇ ಸಂದೇಶವನ್ನು ಸಾರಿದ್ದಾನೆ. 'Duty First'
ಗುವಹಾಟಿಯಲ್ಲಿ ಭಾರೀ ಮಳೆಯ ನಡುವೆಯೂ ಸುಗಮ ಸಂಚಾರ ವ್ಯವಸ್ಥೆಯ ಜವಾಬ್ದಾರಿ ಹೊತ್ತ ಪೇದೆಯೋರ್ವ ಕರ್ತವ್ಯದಲ್ಲಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಾರು ಚಾಲಕನೋರ್ವ ಪೇದೆ ಮಳೆಯ ನಡುವೆಯೇ ಕರ್ತವ್ಯ ನರ್ವಹಿಸುತ್ತಿರುವ ವಿಡಿಯೋ ಮಾಡಿದ್ದು, ಆತನ ಕರ್ತವ್ಯಪ್ರಜ್ಞೆ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಈ ವಿಡಿಯೋವನ್ನು ಅಸ್ಸಾಂ ಪೊಲೀಸ್ ಕೂಡ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಮಳೆಯಲ್ಲಿ ಕರ್ತವ್ಯ ನಿರ್ವಹಿಸಿದ ಪೇದೆ ಮಿಥುನ್ ದಾಸ್ ಅಸ್ಸಾಂ ಪೊಲೀಸರ ಹೆಮ್ಮೆಯ ಪ್ರತಿನಿಧಿ ಎಂದು ಹೇಳಿದೆ.
