Asianet Suvarna News Asianet Suvarna News

ವಿಐಪಿ ಮದುವೆ ಇದೆ : ಅರಮನೆ ಮೈದಾನದ ಕಡೆ ಬರಬೇಡಿ

ಅರಮನೆ ಮೈದಾನದಲ್ಲಿ ಹೈಪ್ರೊಪೈಲ್ ಕುಟುಂಬಗಳ ಮದುವೆ ಇದ್ದು, ಪರ್ಯಾಯ  ರಸ್ತೆ ಬಳಸುವಂತೆ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಮನವಿ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Traffic Police Commissioner R Hithendra Tweet

ಬೆಂಗಳೂರು : ಅರಮನೆ ಮೈದಾನದಲ್ಲಿ ಹೈಪ್ರೊಪೈಲ್ ಕುಟುಂಬಗಳ ಮದುವೆ ಇದ್ದು, ಪರ್ಯಾಯ  ರಸ್ತೆ ಬಳಸುವಂತೆ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಅವರು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಮನವಿ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅರಮನೆ ಮೈದಾನದಲ್ಲಿ ಪ್ರತಿ ವಾರ ಒಂದಿಲ್ಲೊಂದು ರಾಜಕೀಯ ಸಮಾವೇಶ, ಗಣ್ಯರ ವಿವಾಹ ಸಮಾರಂಭ, ಸಭೆಗಳು ನಡೆಯುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಾಗಿರುವ ಕಾರಣ ಈ ರಸ್ತೆ ಮಾರ್ಗವಾಗಿ ಸಂಚಾರಿಸುವ ಸಾರ್ವಜನಿಕರು ಶಪಿಸುತ್ತಲೇ ಸಂಚರಿಸುತ್ತಾರೆ. ‘ಭಾನುವಾರ ಗಣ್ಯವ್ಯಕ್ತಿಗಳ ಕುಟುಂಬಸ್ಥರ ವಿವಾಹ ಸಮಾರಂಭಗಳು ಅರಮನೆ ಮೈದಾನದಲ್ಲಿ ನಡೆಯಲಿದೆ.

ಹೀಗಾಗಿ ಈ ಭಾಗದಲ್ಲಿ ಸಂಚಾರಿಸುವ ಸವಾರರು ಸಂಜೆ ಆರು ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪರ್ಯಾಯ ರಸ್ತೆ ಬಳಸಿ’ ಎಂದು ಹಿತೇಂದ್ರ ಅವರು ಟ್ವೀಟರ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಹಿತೇಂದ್ರ ಅವರ ಟ್ವೀಟರ್‌ಗೆ ಹತ್ತಾರು ಮಂದಿ ಸಾರ್ವಜನಿಕರು ಟ್ವೀಟರ್‌ನಲ್ಲಿ ಪ್ರಕ್ರಿಯಿಸಿದ್ದು, ಗಣ್ಯ ವ್ಯಕ್ತಿಗಳು ಎಂದರೆ ಯಾರು?, ಅರಮನೆ ಮೈದಾನದಲ್ಲಿ ನಡೆಯುವ ವಿವಾಹ ಸಮಾರಂಭಗಳನ್ನು ಏಕೆ ಬೇರೆಡೆ ಸ್ಥಳಾಂತರಿಸಬಾರದು.

ಪೊಲೀಸರು ಏನು ಗಣ್ಯ ವ್ಯಕ್ತಿಗಳ ಸೇವಕರೇ? ಎಂದು ವಾಸೀಂ ರಾಜ್  ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ರಸ್ತೆ ಮೂಲಕವೇ ಸಂಚರಿಸಬೇಕು. ಪರ್ಯಾಯ ರಸ್ತೆ ಬಳಕೆ ಎಲ್ಲಿಂದ ಮಾಡಬೇಕು. ನಿತ್ಯ ಹೀಗೆ ಆದರೆ ಹೇಗೆ? ಇದಕ್ಕೆ ಬೇರೆ ಏನಾದರೂ ಬೇರೆ ಮಾರ್ಗ ಕಂಡಕೊಳ್ಳಬೇಕು. ಗಣ್ಯ ವ್ಯಕ್ತಿಗಳ ಸಭೆ, ಸಮಾರಂಭಗಳು ಏಕೆ ಬೆಂಗಳೂರಿನಿಂದ ಹೊರಗೆ ನಡೆಯಬಾರದು. ರಾಜಕೀಯ ಇತರೆ ಗಣ್ಯ ವ್ಯಕ್ತಿಗಳ ಕುಟುಂಬದ ಸಭೆ-ಸಮಾರಂಭಗಳಿಗಾಗಿ ಬಡ, ಸಾಮಾನ್ಯ ವರ್ಗದ ಜನತೆ ಬೆಲೆ ತೆರಬೇಕಾ? ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ರಜೆ ಕಳೆಯಲು ನಗರಕ್ಕೆ ಬರಲು ಬಳ್ಳಾರಿ ರಸ್ತೆಯಲ್ಲೇ ಸಂಚಾರಿಸಬೇಕು. ಶ್ರೀಮಂತರ ವಿವಾಹವಿದೆ ಎಂದು ಸಾಮಾನ್ಯ ಜನರಿಗೆ ತೊಂದರೆ ಕೊಡುವುದು ಎಷ್ಟು ಸರಿ. ರಾಜಕೀಯ ಮತ್ತು ಶ್ರೀಮಂತರ ವಿಜೃಂಭಣೆಗೆ ಬಡವರು ನಲುಗಾಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ಈ ಭಾಗದಲ್ಲಿ ನಿತ್ಯ ಸಂಚಾರಿಸುವ ರಾಜೇಶ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಕೆಗೆ ವಿರೋಧ: ಇನ್ನು ಟ್ವೀಟರ್‌ನಲ್ಲಿ ಕೆಲವರು ಹಿತೇಂದ್ರ ಅವರ ಬೆಂಬಲಕ್ಕೆ ನಿಂತಿದ್ದು, ಪೊಲೀಸರದ್ದು ಇದರಲ್ಲಿ ಯಾವುದೇ ಪಾತ್ರ ಇಲ್ಲ ಎಂದಿದ್ದಾರೆ. ಉಮಾಶ್ ಎಂಬುವರ ಟ್ವೀಟ್ ಮಾಡಿ, ಹಿತೇಂದ್ರ ಅವರು ಸಾರ್ವಜನಿಕರಿಗೆ ಒಳಿತಾಗಲಿ ಎಂದು ಹೇಳಿದ್ದಾರೆ. ವಿವಾಹ ಸಮಾರಂಭ ನಡೆಯಲು ಅನುಮತಿ ನೀಡುವುದು, ಸಮಾರಂಭ ನಡೆಯದಂತೆ ತಡೆಯುವುದು ಪೊಲೀಸರ ಕೆಲಸವಲ್ಲ. ಸರ್ಕಾರದ ಮಟ್ಟದಲ್ಲಿ ಆ ಕೆಲಸವಾಗಬೇಕು. ಕೇವಲ ಪೊಲೀಸರನ್ನೇ ಗುರಿಯಾಗಿಸಿಟ್ಟುಕೊಂಡು ಟೀಕೆ ಮಾಡುವುದು ಸರಿಯಲ್ಲ ಎಂದು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಅಡಚಣೆ ನಿವಾರಣೆಗೆ :  ಸಾರ್ವಜನಿಕರ ಆಕ್ರೋಶಕ್ಕೆ ಟ್ವೀಟರ್ ಮೂಲಕವೇ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ, ಅರಮನೆ ಮೈದಾನದಲ್ಲಿ ಗಣ್ಯರ ವಿವಾಹ ಸಮಾರಂಭಗಳು ಮಾತ್ರ ನಡೆಯುವುದರಿಂದ ಇದನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಲಾಗಿದೆ. ಯಾವುದೇ ಸಂಚಾರ ಅಡಚಣೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗಾಗಿ ಎಚ್ಚರಿಕೆ ಸಂದೇಶ ನೀಡಲಾಗಿದೆಯಷ್ಟೇ. ಸಂಚಾರ ದಟ್ಟಣೆ ನಿವಾರಣೆಗೆ ನಾವು ಪ್ರಯತ್ನಿಸುತ್ತೇವೆ. ಅದಕ್ಕೆ ಬೇಕಾದ ಕ್ರಮ ತೆಗೆದುಕೊಂಡಿರುತ್ತೇವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios