ನವದೆಹಲಿ[ಜು.09]: ಮುಸ್ಲಿಂ ಮಹಿಳೆಯರಿಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಿ ನಿರ್ದೇಶನ ನೀಡುವಂತೆ ಕೇರಳ ಅಖಿಲ ಭಾರತ ಹಿಂದು ಮಹಾಸಭಾ ಸಲ್ಲಿಸಿದ್ದ ಪಿಐಎಲ್‌ನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಇದೇ ಅರ್ಜಿ ಕುರಿತು ಈ ಹಿಂದೆ ಕೇರಳ ಹೈಕೋರ್ಟ್‌ ವಿಚಾರಣೆ ನಡೆಸಿ ಪಿಐಎಲ್‌ ‘ಅಗ್ಗದ ಪ್ರಚಾರದ ಉದ್ದೇಶ’ ಹೊಂದಿದೆ ಎಂಬ ಆದೇಶವನ್ನು ಸುಪ್ರೀಂ ಕೂಡ ಎತ್ತಿ ಹಿಡಿದಿದೆ.

ಅರ್ಜಿ ಕುರಿತು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿ, ಅರ್ಜಿದಾರರಾದ ಕೇರಳ ಹಿಂದು ಮಹಾಸಭಾದ ಅಧ್ಯಕ್ಷ, ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ ನಾಥ್‌ ಅವರನ್ನು ತರಾಟೆಗೆ ತೆಗೆದುಕೊಂಡು, ಅರ್ಜಿದಾರನಿಗೆ ನೀನು ಯಾರು?, ಇದರಿಂದ ನಿನಗೆ ಏನು ತೊಂದರೆಯಾಗಿದೆ?, ಪ್ರಾರ್ಥನೆಗಾಗಿ ಮಸೀದಿಗೆ ತೆರಳಲು ತೊಂದರೆಗೀಡಾದವರು ಬಂದು ನಮ್ಮ ಮುಂದೆ ಅರ್ಜಿ ಸಲ್ಲಿಸಲಿ ಎಂದು ಸೂಚಿಸಿ ಅರ್ಜಿಯನ್ನು ವಜಾ ಮಾಡಿತು.

ಜೊತೆಗೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನವೇ ಮುದ್ರಣ ಮಾದ್ಯಮದಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದು, ಇದು ‘ಅಗ್ಗದ ಪ್ರಚಾರದ ಉದ್ದೇಶ’ ಹೊಂದಿರುವುದು ಸ್ಪಷ್ಟಎಂದು ಕೋರ್ಟ್‌ ವಿಚಾರಣೆ ವೇಳೆ ಹೇಳಿತು.