ಬೆಂಗಳೂರು(ಅ.2): ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡಬೇಕೆ ಅಥವಾ ಸದನದ ನಿರ್ಣಯಕ್ಕೆ ಬದ್ದರಾಗಿರಬೇಕೇ ಎಂಬುದರ ಗೊಂದಲದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಇಂದು 2ನೇ ಬಾರಿ ವಿಶೇಷ ವಿಧಾನಮಂಡಲ ಅಧಿವೇಶನ ಕರೆದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸದನ ಆರಂಭವಾಗಲಿದ್ದು, ತಮಿಳುನಾಡಿಗೆ ನೀರು ಬಿಟ್ಟರೆ ಮತ್ತು ಬಿಡದಿದ್ದರೆ ಆಗುವ ಸಾಧಕ ಬಾದಕಗಳ ಕುರಿತು ಚರ್ಚೆ ನಡೆಯಲಿದೆ. ನ್ಯಾಯಾಂಗ ನಿಂದನೆ ತೂಗುಗತ್ತಿ ಸರ್ಕಾರದ ನೆತ್ತಿಯ ಮೇಲೆ ತೂಗಾಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಕುರಿತಂತೆ ಪ್ರತಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.

ಕಾವೇರಿ ಕೊಳ್ಳದಲ್ಲಿ ಒಳ ಹರಿವಿನಿಂದ ಹೆಚ್ಚಾಗಿರುವ ನೀರನ್ನು ಬಿಡುವ ಕುರಿತಂತೆ ಸರ್ಕಾರ ನಿರ್ಣಯ ಕೈಗೊಳ್ಳಬಹುದು. ಆ ಮೂಲಕ ನ್ಯಾಯಾಂಗ ನಿಂದನೆಯಿಂದ ಸರ್ಕಾರ ಪಾರಗಲು ಯತ್ನಿಸಬಹುದು. ಇನ್ನು ಕುಡಿಯುವ ನೀರಿಗಾಗಿ ಮಾತ್ರ ಕಾವೇರಿ ಎಂದು ಈ ಹಿಂದಿನ ವಿಶೇಷ ಅಧಿವೇಶನದಲ್ಲಿ ಪಾಸ್ ಮಾಡಿದ್ದ ನಿರ್ಣಯವನ್ನು ಬದಲಾಯಿಸಿ, ಮಂಡ್ಯ ಭಾಗದಲ್ಲಿ ರೈತರು ಬೆಳೆದಿರುವ ಬೆಳೆಗಳಿಗೆ ನೀರು ಬಿಡುವ ಕುರಿತಂತೆ ನಿರ್ಣಯವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಸುಪ್ರೀಂಕೋರ್ಟ್ ಆದೇಶ ಮರು ಪರಿಶೀಲನೆಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಲಿದೆ.