ಮಂಡ್ಯ/ಮೈಸೂರು (ಸೆ.05): ಪ್ರತಿ ದಿನ 6 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪಿನ ಗಡುವು ನಾಳೆ ಕೊನೆಯಾಗಲಿದೆ. ಅ.7ರಿಂದ 18ರವರೆಗೆ ಕೇವಲ 2 ಸಾವಿರ ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡಬೇಕು.

ಕೃಷ್ಣರಾಜಸಾಗರ ಜಲಾಶಯದಿಂದ ತಮಿಳುನಾಡಿಗೆ ಬುಧವಾರ 5057 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗಿದೆ. ಕಳೆದ ಸೋಮವಾರ ರಾತ್ರಿಯೇ 4 ಸಾವಿರ ಕ್ಯುಸೆಕ್‌ ಬಿಡಲಾಗಿತ್ತು. ಮಂಗಳವಾರ ಬೆಳಗ್ಗೆ 1 ಸಾವಿರ ಕ್ಯುಸೆಕ್‌ ಅಧಿಕ ನೀರನ್ನು ಬಿಡಲಾಗಿದೆ. ಬುಧವಾರ ಸಂಜೆ ವೇಳೆಗೆ 8657 ಕ್ಯುಸೆಕ್‌ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ. ಇದರಲ್ಲಿ 3600 ಕ್ಯುಸೆಕ್‌ ನೀರು ಮಂಡ್ಯದ ವಿಸಿ ನಾಲೆ ಸೇರಿದಂತೆ ಇತರೆ ನಾಲೆಗಳಿಗೆ ಬಿಡಲಾಗುತ್ತಿದೆ. ಈ ನಡುವೆ ಒಳ ಹರಿವಿನ ಪ್ರಮಾಣ 3200 ಕ್ಯುಸೆಕ್‌ ಆಗಿದೆ.

ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಕೃಷ್ಣರಾಜಸಾಗರದಲ್ಲಿ 15.07 ಟಿಎಂಸಿ ನೀರಿತ್ತು. ಬುಧವಾರ ಸಂಜೆ 7 ಗಂಟೆ ವೇಳೆಗೆ 14 ಟಿಎಂಸಿ ನೀರಿದೆ. ಈಗಾಗಲೇ ಸುಮಾರು 2 ಟಿಎಂಸಿ ನೀರು ಹರಿದು ಹೋಗಿದೆ. ಕಬಿನಿ ಜಲಾಶಯದಿಂದ 4000 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

ಹಾರಂಗಿ ಜಲಾಶಯದಿಂದ 400 ಕ್ಯುಸೆಕ್‌ ಮತ್ತು ಹೇಮಾವತಿ ಜಲಾಶಯದಿಂದ 3030 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.