ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಮೋದಿ ಟೀಮ್‌ಗೆ ಕರ್ನಾಟಕದ ಎರಡು ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ಬೆಂಗಳೂರು (ಸೆ.02): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಾಳೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಮೋದಿ ಟೀಮ್ಗೆ ಕರ್ನಾಟಕದ ಎರಡು ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ.
ನಾಳೆ ಸಂಪುಟ ವಿಸ್ತರಣೆ ಸಮಾರಂಭ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಕೇಂದ್ರ ಮಂತ್ರಿಮಂಡಲದ ಗರಿಷ್ಠ ಮಿತಿ 81. ಪ್ರಸಕ್ತ ಪ್ರಧಾನಿಯೂ ಸೇರಿ 73 ಮಂದಿ ಇದ್ದಾರೆ. ಮೌಲ್ಯಮಾಪನದಲ್ಲಿ ಕನಿಷ್ಠ ಅಂಕ ಪಡೆದಿರುವ 10 ಮಂದಿ ಸಚಿವರು ರಾಜೀನಾಮೆ ನೀಡಲಿದ್ದಾರೆ. ಇದರಿಂದ 18 ಸ್ಥಾನಗಳು ಖಾಲಿ ಬೀಳಲಿವೆ. ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳಿಗೆ ಆದ್ಯತೆ ನೀಡಿ ಹೊಸ ಮುಖಗಳನ್ನು ನೇಮಿಸುವ ಸಾಧ್ಯತೆ ಇದೆ. ಈಗಾಗಲೇ 7 ಸಚಿವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಕೆಲವರು ನೀಡುವ ಸಾಧ್ಯತೆ ಇದೆ.
ಇನ್ನು ರಾಜ್ಯದಿಂದ ಪ್ರಹ್ಲಾದ್ ಜೋಶಿ ಸಂಪುಟ ಸೇರುವುದು ಖಚಿತವಾಗಿದೆ. ಉಳಿದಂತೆ ಶಿವಕುಮಾರ್ ಉದಾಸಿ ಮತ್ತು ಸುರೇಶ್ ಅಂಗಡಿ ನಡುವೆ ಸ್ಪರ್ಧೆ ಇದ್ದು, ಅಂಗಡಿ ಪರ ಹೆಚ್ಚು ಒಲವು ಕಂಡುಬಂದಿದೆ. ಶ್ರೀರಾಮುಲು, ಶೋಭಾ ಕರಂದ್ಲಾಜೆ ಹೆಸರುಗಳೂ ಚಾಲ್ತಿಯಲ್ಲಿವೆ. ಡಿ.ವಿ. ಸದಾನಂದ ಗೌಡ ಸಚಿವರಾಗಿಯೇ ಮುಂದುವರಿಯುವ ನಿರೀಕ್ಷೆ ಇದೆ. ಮೌಲ್ಯಮಾಪನದಲ್ಲಿ ಅನಂತ ಕುಮಾರ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ನಗರಾಭಿವೃದ್ಧಿ ಖಾತೆ ಜವಾಬ್ದಾರಿಯೂ ದಕ್ಕುವ ನಿರೀಕ್ಷೆ ಇದೆ. ವೆಂಕಯ್ಯನಾಯ್ಡು ಅವರಿಂದ ತೆರವಾಗಿರುವ ಸಚಿವಾಲಯ ಅನಂತ್ ಹೆಗಲಿಗೆ ಬರುವ ಸಾಧ್ಯತೆ ಇದೆ. ಅರುಣ್ ಜೇಟ್ಲಿ ಕೈಯಲ್ಲಿರುವ ರಕ್ಷಣಾ ಖಾತೆಗೆ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆದಿದೆ. ಕಲ್ರಾಜ್ ಮಿಶ್ರಾ, ಬಂಡಾರು ದತ್ತಾತ್ರೇಯ ರಾಜ್ಯಪಾಲರಾಗಿ ನೇಮಕ ಸಾಧ್ಯತೆ ಇದೆ.
