ಬೆಂಗಳೂರು (ಸೆ.05): ಬಹು ನಿರೀಕ್ಷಿತ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಅ. 6ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆಯಲಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಕ್ಕೆ ಈ ಸಭೆ ತೆರೆ ಎಳೆಯಲಿದೆ ಎಂದೇ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್‌, ಡಿ.ವಿ.ಸದಾನಂದಗೌಡ, ವಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಆರ್‌ಎಸ್‌ಎಸ್‌ ಮುಖಂಡರಾದ ಸಂತೋಷ್‌, ಅರುಣ್‌ ಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್‌ ಲಿಂಬಾವಳಿ, ಸಿ.ಟಿ.ರವಿ, ಮಾಜಿ ಅಧ್ಯಕ್ಷ ಪ್ರಹ್ಲಾದ್‌ ಜೋಶಿ, ಮಾಜಿ ಸಚಿವ ಸಿ.ಎಂ.ಉದಾಸಿ, ರಾಜ್ಯ ಉಸ್ತುವಾರಿ ಮುರಳೀಧರ್‌ರಾವ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ನೇಮಕಗೊಂಡ ಬಳಿಕ ನಡೆಯುತ್ತಿರುವ ಎರಡನೇ ಕೋರ್‌ ಕಮಿಟಿ ಸಭೆ ಇದಾಗಿದ್ದು, ಇದೇ ಮೊದಲ ಬಾರಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್‌ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪದಾಧಿಕಾರಿಗಳ ನೇಮಕದಿಂದ ಆರಂಭಗೊಂಡ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತದಿಂದ ಪಕ್ಷದ ಪ್ರಮುಖ ಮುಖಂಡರಲ್ಲೇ ಎರಡು ಗುಂಪುಗಳನ್ನಾಗಿಸಿದೆ. ಹೀಗಾಗಿ ನಾಳಿನ ಸಭೆಯಲ್ಲಿ ಇವರಿಬ್ಬರ ನಡುವಣ ಬಿಕ್ಕಟ್ಟು ಶಮನಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.