ಜೋರ್‌ಹಟ್‌[ಫೆ.24]: ಅಸ್ಸಾಂನ ಗೋಲಾಘಾಟ್‌ ಮತ್ತು ಜೋರ್‌ಹಟ್‌ ತೋಟಗಳಲ್ಲಿ ಕಳ್ಳಭಟ್ಟಿಸೇವನೆಯಿಂದ ಸಾವಿಗೀಡಾದವರ ಸಂಖ್ಯೆ 114ಕ್ಕೆ ಏರಿಕೆಯಾಗಿದ್ದು, 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿರುವವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟುಹೆಚ್ಚುವ ಭೀತಿ ಕಾಡಿದೆ.

ಈ ನಡುವೆ ಪ್ರತಿ 10 ನಿಮಿಷಕ್ಕೆ ಒಬ್ಬರಂತೆ ಅಸ್ವಸ್ಥರ ಸಾವಿನ ಸುದ್ದಿ ಹೊರಬೀಳುತ್ತಿದೆ ಎಂದು ಜೋರ್‌ಹಟ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಟೀ ತೋಟದಲ್ಲಿ ವಿಷಪೂರಿತ ಮದ್ಯಸೇವಿಸಿದ ಕಾರಣ 400ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಆಸ್ಪತ್ರೆ ಸೇರಿದ್ದರು. ಈ ಪೈಕಿ ಈಗ 114 ಜನ ಸಾವನ್ನಪ್ಪಿರುವುದು ಖಚಿತವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಮದ್ಯ ತಯಾರು ಮಾಡುತ್ತಿದ್ದ 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಉತ್ತರಾಖಂಡ ಮತ್ತು ಉತ್ತರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ವಿಷಪೂರಿತ ಮದ್ಯಸೇವಿಸಿ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೆ ಮತ್ತೊಮ್ಮೆ ಅಂಥದ್ದೇ ದುರ್ಘಟನೆ ಸಂಭವಿಸಿದೆ.