Asianet Suvarna News Asianet Suvarna News

ಇಂದಿನಿಂದ ಮೈಸೂರಿನಲ್ಲಿ ಕನ್ನಡ ಹಬ್ಬ; ಅಕ್ಷರ ಜಾತ್ರೆಗೆ ಅರಮನೆ ನಗರಿ ಸಜ್ಜು

ಈ ಬಾರಿ ‘ಬಂಡಾಯ ಕವಿ’ ಪ್ರೊ.ಚಂದ್ರಶೇಖರ ಪಾಟೀಲರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಈ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ವಿಶೇಷ.

Today Kannada Sahitya Sammelana Start In Mysure

ಮೈಸೂರು(ನ.24): ಮಲ್ಲಿಗೆ ನಗರಿ ಮೈಸೂರು ಮೂರು ದಿನಗಳ ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

ಮೈಸೂರಲ್ಲಿ ಇಪ್ಪತ್ತೇಳು ವರ್ಷಗಳ ಬಳಿಕ ಅಖಿತ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಜಿಲ್ಲೆಯ ಪಾಲಿಗಿದು ಒಟ್ಟಾರೆ ಐದನೇ ಸಮ್ಮೇಳನ. 1917ರಲ್ಲಿ ‘ರಾಜಮಂತ್ರ ಪ್ರವೀಣ’ ಎಚ್.ವಿ. ನಂಜುಂಡಯ್ಯ, 1930ರಲ್ಲಿ ‘ಕನ್ನಡ ಕುಲ ಪುರೋಹಿತ’ ಆಲೂರು ವೆಂಕಟರಾವ್, 1955ರಲ್ಲಿ ‘ಕಡಲತೀರದ ಭಾರ್ಗವ’ ಕೆ. ಶಿವರಾಮ ಕಾರಂತ, 1990ರಲ್ಲಿ ‘ಪ್ರೇಮಕವಿ’ ಕೆ.ಎಸ್. ನರಸಿಂಹಸ್ವಾಮಿ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನಗಳು ನಡೆದಿದ್ದವು. ಈ ಬಾರಿ ‘ಬಂಡಾಯ ಕವಿ’ ಪ್ರೊ.ಚಂದ್ರಶೇಖರ ಪಾಟೀಲರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯುತ್ತಿದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಈ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ವಿಶೇಷ.

ಈಗಾಗಲೇ ಮಡಿಕೇರಿ ಹಾಗೂ ಹಾಸನ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಇದು ಮೂರನೇ ಸಮ್ಮೇಳನ. ರಾಜ್ಯ ಸರ್ಕಾರ ಈಗಾಗಲೇ ಸಮ್ಮೇಳನಕ್ಕೆ ₹8 ಕೋಟಿ ಬಿಡುಗಡೆ ಮಾಡಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿವೆ.

ದೀಪಾಲಂಕಾರ: ಸಮ್ಮೇಳನದ ಹಿನ್ನೆಲೆಯಲ್ಲಿ ನಗರದ ಎಲ್ಲಾ ರಸ್ತೆ, ವೃತ್ತಗಳಲ್ಲಿ ಕೆಂಪು-ಹಳದಿ ಬಣ್ಣದ ಬಾವುಟಗಳು ಹಾರಾಡುತ್ತಿವೆ. ಪ್ರಮುಖ ರಸ್ತೆ ಹಾಗೂ ವೃತ್ತಗಳಿಗೇ ಕನ್ನಡ ಧ್ವಜದ ಬಣ್ಣದಲ್ಲೇ ದೀಪಾಲಂಕಾರ ಮಾಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಸಮ್ಮೇಳನಾಧ್ಯಕ್ಷರ ಕಟೌಟ್‌'ಗಳನ್ನು ಕೂಡ ಹಾಕಲಾಗಿದೆ. ಅತಿ ಗಣ್ಯರು ಹಾಗೂ ಮಾಧ್ಯಮದವರಿಗೆ ವೇದಿಕೆಯ ಎಡ-ಬಲ, ಪ್ರತಿನಿಧಿಗಳಿಗೆ ಹಾಕಿ ಮೈದಾನ, ಸಾರ್ವಜನಿಕರಿಗೆ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಪರವೂರಿನಿಂದ ಬಂದಿರುವ ಸಾಹಿತಿಗಳು, ಪ್ರತಿನಿಧಿಗಳ ವಾಸ್ತವ್ಯಕ್ಕೆ ನಗರದ ಅತಿಥಿಗೃಹಗಳು, ಹೋಟೆಲ್‌'ಗಳು, ಹಾಸ್ಟೆಲ್‌'ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅದ್ಧೂರಿ ಮೆರವಣಿಗೆ: ಅರಮನೆ ಕೋಟೆ ಬಳಿಯಿಂದ ಶುಕ್ರವಾರ ಬೆಳಗ್ಗೆ 8.30ಕ್ಕೆ ಸಂಪ್ರದಾಯದಂತೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಅಶೋಕ ರಸ್ತೆ, ಇರ್ವಿನ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್. ವೃತ್ತ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಮೆರವಣಿಗೆ ಮಹಾರಾಜ ಕಾಲೇಜು ಮೈದಾನ ತಲುಪಲಿದೆ. ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಉಮಾಶ್ರೀ, ಡಾ.ಗೀತಾ ಮಹದೇವಪ್ರಸಾದ್, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜಿಲ್ಲೆಯ ಸಂಸದರು, ಶಾಸಕರು, ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ, ರಾಜ್ಯ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಪಾಲ್ಗೊಳ್ಳುವರು.

ನಂತರ ಪ್ರಧಾನ ವೇದಿಕೆಯಲ್ಲದೆ ಮಹಾರಾಜ ಕಾಲೇಜು ಶತಮಾನೋತ್ಸವ ಭವನ ಹಾಗೂ ಕಲಾಮಂದಿರದ ಎರಡು ಸಮಾನಂತರ ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಸಮ್ಮೇಳನದ ಪ್ರಧಾನ ವೇದಿಕೆಗೆ ರಾಷ್ಟ್ರಪತಿ ಕುವೆಂಪು ಪ್ರಧಾನ ವೇದಿಕೆ ಎಂದು ಹೆಸರಡಿಲಾಗಿದೆ. ಈಗಾಗಲೇ ಸಾಹಿತಿಗಳು, ಸಾಹಿತ್ಯಾಸಕ್ತರು ಮೈಸೂರಿನತ್ತ ಹರಿದು ಬರುತ್ತಿದ್ದಾರೆ. ನಗರದಲ್ಲೀಗ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಅತಿಥಿಗಳಿಗೆ ಊಟೋಪಚಾರಕ್ಕಾಗಿ ಆಹಾರ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸಮ್ಮೇಳನಕ್ಕೆ ರಾಜ್ಯದ ವಿವಿಧ ಸ್ಥಳಗಳಿಂದ ಸಾವಿರಾರು ಜನ ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ 900 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಅಲ್ಲದೆ, 7 ಕೆಎಸ್‌ಆರ್‌'ಪಿ ತುಕಡಿ, 8 ಸಿಎಆರ್ ತುಕಡಿಗಳು ಹಾಗೂ ತುರ್ತು ಸೇವೆಗಾಗಿ 5 ಅಗ್ನಿ ಶಾಮಕ ದಳ, 6 ಆಂಬ್ಯುಲೆನ್ಸ್‌'ಗಳನ್ನು ನಿಯೋಜಿಸಲಾಗಿದೆ.

ವರದಿ: ಅಂಶಿ ಪ್ರಸನ್ನಕುಮಾರ್, ಕನ್ನಡಪ್ರಭ

Follow Us:
Download App:
  • android
  • ios